ಬೆಂಗಳೂರು : ವಾಟ್ಸಪ್ ಗ್ರೂಪ್‌ನಲ್ಲಿ ಸದಸ್ಯರನ್ನು ಉದ್ದೇಶಿಸಿ ಕೋಮುಗಲಭೆ ಸೃಷ್ಟಿಸಲು ಕರೆ ನೀಡಿರುವ ಆರೋಪದಡಿ ಪುನೀತ್ ಕೆರೆಹಳ್ಳಿ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲಾಗಿದೆ.
ಆರೋಪವೇನು? : ರಾಷ್ಟ್ರರಕ್ಷಣಾ ಪಡೆ ಹೆಸರಿನ ಸಂಘಟನೆಯ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಪುನೀತ್ ಕೆರೆಹಳ್ಳಿ ಕಳಿಸಿರುವುದು ಎನ್ನಲಾದ ಸಂದೇಶದಲ್ಲಿ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಸೂಚನೆ ದೊರೆತಿದೆ. ಸದಸ್ಯರು ಸಿದ್ಧರಾಗಿರಿ ಎಂದು ಕರೆ ನೀಡಲಾಗಿತ್ತು. ಈ ವಾಟ್ಸ್ ಪ್ ಸಂದೇಶದ ಸ್ಕ್ರೀನ್ ಶಾಟ್ ಸಹಿತ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್, ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.
ಪುನೀತ್ ಕೆರೆಹಳ್ಳಿಯಿಂದ ಪ್ರತಿದೂರು : ತಮ್ಮ ಮೇಲಿನ ಆರೋಪದ ವಿರುದ್ಧ ಪುನೀತ್ ಕೆರೆಹಳ್ಳಿ ಪ್ರತಿ ದೂರು ದಾಖಲಿಸಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿರುವ ಪುನೀತ್ ಕೆರೆಹಳ್ಳಿ, 'ತಮ್ಮ ನಂಬರಿನ ನಕಲಿ ಸ್ಕ್ರೀನ್ ಶಾಟ್ ವೊಂದನ್ನು ಬಳಸಿ ಕೋಮು ಗಲಭೆ ಸೃಷ್ಟಿಸಲು ಪುನೀತ್ ಕೆರೆಹಳ್ಳಿಯನ್ನು ಬಿಜೆಪಿ ಬಳಸುತ್ತಿದೆ ಎಂದು ಆರೋಪಿಸಲಾಗಿದೆ. ಯಾರ ಮೊಬೈಲ್ ನಲ್ಲಿ ಆ ಸ್ಕ್ರೀನ್ ಶಾಟ್ ತೆಗೆದಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
'ಗೋದ್ರಾ ಬಗ್ಗೆ ಹೇಳಿಕೆ ಕೊಟ್ಟ ಮೇಲೆ ಈ ರೀತಿ ಪೋಸ್ಟ್ ಮಾಡಲಾಗಿದೆ. ರಾಮ ಮಂದಿರಕ್ಕೆ ಹೋಗುವವರನ್ನು ಭಯ ಪಡಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಇದೆಲ್ಲ ಹಿಂದೂ ಕಾರ್ಯಕರ್ತರನ್ನು ಭಯ ಪಡಿಸುವ ಕೆಲಸ. ನನ್ನನ್ನು ಭಯೋತ್ಪಾದಕ ಅಂತೀರಾ, ನಾಚಿಕೆ ಆಗಲ್ವಾ.. ಡಿ.ಜೆ ಹಳ್ಳಿಲಿ ನಿಮ್ಮ ಅಣ್ಣ ತಮ್ಮಂದಿರು ಮಾಡಿರೋ ಕೆಲಸ ಗೊತ್ತಿಲ್ವಾ? ಎಂದು ಕಿಡಿಕಾರಿದ್ದಾರೆ. ಅಲ್ಲದೆ ಎಫ್ಐಆರ್ ದಾಖಲಿಸುವವರೆಗೂ ಠಾಣೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಮಾಲ್ ಸಿಬ್ಬಂದಿಗೆ ಬೆದರಿಕೆ ಆರೋಪ; ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್