ಬೆಂಗಳೂರು : ದೋಷಾರೋಪ ಪಟ್ಟಿಯಲ್ಲಿ ಸ್ವತಂತ್ರ ಸಾಕ್ಷಿಯನ್ನು ತೋರಿಸಿಲ್ಲ ಎಂಬ ಕಾರಣಕ್ಕೆ ಆರೋಪಿ ವಿರುದ್ಧ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಮಟ್ಕಾ ನಡೆಸುತ್ತಿದ್ದ ಆರೋಪ ಸಂಬಂಧ ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಪಾವಗಡ ಪಟ್ಟಣ ನಿವಾಸಿ ರಾಮಾಂಜಿ (53) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ ಸೂಚಿಸಿದೆ.
ಪ್ರಕರಣದ ಹಿನ್ನೆಲೆ: ಖಚಿತ ಮಾಹಿತಿ ಆಧರಿಸಿ ಪಾವಗಡ ಠಾಣೆ ಪೊಲೀಸರು, 2021ರ ಸೆ.27ರಂದು ಮಟ್ಕಾ ನಡೆಯುತ್ತಿದ್ದ ಸ್ಥಳವೊಂದರ ಮೇಲೆ ದಾಳಿ ನಡೆಸಿದ್ದರು. ದಾಳಿ ನಡೆಸಿದ ನಂತರ ಗ್ರಾಹಕರು ಸ್ಥಳದಿಂದ ಪರಾರಿಯಾಗಿದ್ದು, ಮೊದಲನೇ ಆರೋಪಿ ಸಿಕ್ಕಿಬಿದ್ದಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಹಣ ಮತ್ತು ಮಟ್ಕಾ ಆಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದರು.
ಮಟ್ಕಾ ನಡೆಸುತ್ತಿದ್ದ ಆರೋಪದ ಮೇಲೆ ಅರ್ಜಿದಾರರ ವಿರುದ್ಧ ಪಾವಗಡ ಠಾಣಾ ಪೊಲೀಸರು, ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 78(3) ಅಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಅನುಮತಿ ಪಡೆದು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿದ್ದರು.
ಬಳಿಕ ತನಿಖೆ ಪೂರ್ಣಗೊಳಿಸಿ ಪಾವಗಡ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿ, ಅರ್ಜಿದಾರರನ್ನು ಎರಡನೇ ಆರೋಪಿಯನ್ನಾಗಿ ಮಾಡಿದ್ದರು. ಹಾಗಾಗಿ, ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಲು ಕೋರಿ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದ.
ಆರು ದಿನದಲ್ಲಿ ದೋಷಾರೋಪ ಪಟ್ಟಿ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣವನ್ನು ಪೊಲೀಸರು ಸೂಕ್ತವಾಗಿ ತನಿಖೆ ನಡೆಸಿಲ್ಲ. ತಮಗೆ ನೋಟಿಸ್ ಜಾರಿ ಮಾಡಿಲ್ಲ ಹಾಗೂ ವಿಚಾರಣೆ ಸಹ ನಡೆಸಿಲ್ಲ. ಆದರೂ ಮೊದಲನೇ ಆರೋಪಿಯ ಹೇಳಿಕೆ ಆಧರಿಸಿ ಅರ್ಜಿದಾರನ ವಿರುದ್ಧ ಅದರೂ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ಯಾರು ನಡೆಸಬೇಕು ಎಂಬುದಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಿರ್ದಿಷ್ಟವಾಗಿ ಹೇಳಿಲ್ಲ. ಎಫ್‌ಐಆರ್ ದಾಖಲಿಸಿದ ಕೇವಲ ಆರು ದಿನದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದರು.
ಕಾನೂನು ಪ್ರಕ್ರಿಯೆ ದುರ್ಬಳಕೆ ಆರೋಪ: ಅಲ್ಲದೇ, ಅರ್ಜಿದಾರ ಮಟ್ಕಾ ನಡೆಸುತ್ತಿದ್ದ ಎಂಬುದನ್ನು ಸಾಬೀತುಪಡಿಸುವ ಯಾವುದೇ ಸ್ವತಂತ್ರ ಸಾಕ್ಷಿಯನ್ನು ದೋಷಾರೋಪ ಪಟ್ಟಿಯಲ್ಲಿ ತೋರಿಸಿಲ್ಲ. ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 78(3) ಪ್ರಕಾರ ಯಾರು ಮಟ್ಕಾ ನಡೆಸುತ್ತಿರುವ ಜಾಗದಲ್ಲಿದ್ದುಕೊಂಡು ಆಟ ಆಡುತ್ತಿರುತ್ತಾರೋ ಅವರು ಶಿಕ್ಷೆಗೆ ಅರ್ಹರಾಗಿರುತ್ತಾರೆ. ಆದರೆ, ಅರ್ಜಿದಾರ ಸ್ಥಳದಲ್ಲಿಯೇ ಇರಲಿಲ್ಲ. ಆತನಿಗೂ ಮೊದಲನೆ ಆರೋಪಿಗೆ ಯಾವುದೇ ಸಂಬಂಧವಿಲ್ಲ. ಹೀಗಿದ್ದರೂ ಅರ್ಜಿದಾರ ವಿರುದ್ಧ ವಿಚಾರಣೆ ನಡೆಸುತ್ತಿರುವುದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಿದೆ ಎಂದು ಕೋರಿದ್ದರು.
ಈ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಪೊಲೀಸರು ಮಟ್ಕಾ ಚೀಟಿ, ಅದನ್ನು ಬರೆದುಕೊಟ್ಟ ಬಾಲ್ ಪೆನ್ ಮತ್ತು 4,180 ರು. ನಗದು ವಶಪಡಿಸಿಕೊಂಡಿದ್ದಾರೆ. ಮೊದಲನೇ ಆರೋಪಿ ವಿಚಾರಣೆ ವೇಳೆ ನೀಡಿದ ಹೇಳಿಕೆ ಪ್ರಕಾರ, ಎರಡನೇ ಆರೋಪಿಯಾದ ಅರ್ಜಿದಾರನೇ ಮಟ್ಕಾ ಕೇಂದ್ರದ ಮಾಲೀಕನಾಗಿದ್ದೇನೆ. ಆತನೆ ನನಗೆ ಹಣ ನೀಡಿದ ಎಂದು ತಿಳಿಸಿದ್ದರು. ಅದರ ಆಧಾರದ ಮೇಲೆ ಪೊಲೀಸರು, ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ತಿಳಿಸಿದೆ.
ಮಟ್ಕಾ ಕೇಂದ್ರ ನಡೆಸುವವನಲ್ಲದೇ, ಕೇಂದ್ರದ ಮಾಲೀಕ ಸಹ ಶಿಕ್ಷಾರ್ಹ ವ್ಯಕ್ತಿಯಾಗಿರುತ್ತಾನೆ. ಈ ಪ್ರಕರಣದಲ್ಲಿ ಅರ್ಜಿದಾರನೇ ಮಟ್ಕಾ ಕೇಂದ್ರದ ಮಾಲೀಕನಾಗಿದ್ದಾನೆ. ಅದು ಮೊದಲನೇ ಆರೋಪಿ ಹೇಳಿಕೆಯನ್ನು ಒಪ್ಪಿಕೊಳ್ಳಬಹುದೋ ಅಥವಾ ಬೇಡವೋ ಎಂಬುದನ್ನು ವಿಚಾರಣಾ ನ್ಯಾಯಾಲಯದ ವಿಚಾರಣೆ ವೇಳೆ ನಿರ್ಧರಿಸಬೇಕಿದೆ.
ಇಂತಹ ಸಂದರ್ಭದಲ್ಲಿ ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಯಾವುದೇ ಸ್ವತಂತ್ರ್ಯ ಸಾಕ್ಷಿಯನ್ನು ತೋರಿಸಿಲ್ಲ ಎಂಬ ಕಾರಣಕ್ಕೆ ಆರೋಪಿ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ರದ್ದುಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.
ಇದನ್ನೂ ಓದಿ: ಅನುದಾನ ರಹಿತ ಶಾಲೆಗಳ ಸ್ವಂತ ಪಠ್ಯ ಪುಸ್ತಕಕ್ಕೆ ಅನುಮತಿ: ಕುಸ್ಮ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿಟ್ಟ ಹೈಕೋರ್ಟ್