ಬೆಂಗಳೂರು: ಕರ್ನಾಟಕದ ಪಾಲಿನ ಸ್ಪೆಷಲ್ ಗ್ರಾಂಟ್ಸ್ ಬರಲೇ ಬೇಕು. ಇದಕ್ಕಾಗಿ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯಿರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಎಲ್ಲರೂ ಕೂತು ರಾಜ್ಯದ ಪಾಲಿನ ವಿಶೇಷ ಅನುದಾನವನ್ನು ತರಲೇಬೇಕು. ಇದಕ್ಕಾಗಿ ಸರ್ವ ಪಕ್ಷ ನಿಯೋಗ ಕೊಂಡೊಯ್ಯಿರಿ. ನಿಮಗೇನಾದರೂ ಮುಜುಗರ ಆದರೆ ನಾನು ಮಾತನಾಡುತ್ತೇನೆ. 15ನೇ ಹಣಕಾಸು ಆಯೋಗದಿಂದ ನಮಗೆ ದೊಡ್ಡ ಅನ್ಯಾಯವಾಗಿದೆ. ನಿರ್ಮಲಾ ಸೀತಾರಾಮನ್ ಅವರಿಂದ ನಮಗೆ ಅನ್ಯಾಯವಾಗಿದೆ. ಅದನ್ನು ನಾವು ಪ್ರತಿಭಟಿಸಬೇಕು. ನಮ್ಮ ಹಣವನ್ನು ಉತ್ತರ ಪ್ರದೇಶ, ಬಿಹಾರಕ್ಕೆ ಕೊಡಲು ಬಿಡುವುದಾ? ಈ ಬಗ್ಗೆ ನಾವು ಸುಮ್ಮನೆ ಕೂರಬೇಕಾ? ಎಂದು ಕಿಡಿ ಕಾರಿದರು.
ಈ ಮುಂಗಡ ಪತ್ರಕ್ಕೆ ಯಾವುದೇ ಬದ್ಧತೆ ಇಲ್ಲ. ಬಾಲಗ್ರಹ ಪೀಡಿತವಾಗಿರುವ ಮುಂಗಡಪತ್ರವಿದು ಎಂದಿದ್ದೆ. ನನಗೂ ಹಸಿರು ಟವೆಲ್ ಮೇಲೆ ಬಹಳ ಗೌರವ. ರೈತಪರ ಹೋರಾಟದ ಸಂಕೇತ ಹಸಿರು ಶಾಲು. 1970 ರಿಂದ 80ರ ವರೆಗೆ ನಾನೂ ಹಸಿರು ಶಾಲು ಹಾಕಿದ್ದೆ. ಬಿಜೆಪಿಯವರೆಲ್ಲ ಕೇಸರಿ ಟವೆಲ್ ಹಾಕಿಕೊಂಡರೂ ಯಡಿಯೂರಪ್ಪ ಮಾತ್ರ ಹಸಿರು ಟವೆಲ್ ಹಾಕಿಕೊಂಡು ಬರುತ್ತಿದ್ದರು. ಆದರೆ, ಈ ಬಜೆಟ್ ನೋಡಿದ ಮೇಲೆ ಹಸಿರು ಟವೆಲ್ ಒಳಗೆ ಕೇಸರಿ ಟವೆಲ್ ಇದೆ ಎನ್ನಿಸಿತು ಎಂದು ಕಿಚಾಯಿಸಿದರು.
15ನೇ ಹಣಕಾಸು ಆಯೋಗದಿಂದ ಅನುದಾನಕ್ಕೆ ಬ್ರೇಕ್ ವಿಚಾರವಾಗಿ ಮಾತನಾಡಿದ ಅವರು, 15 ನೇ ಹಣಕಾಸು ಆಯೋಗದಿಂದ 5,495 ಕೋಟಿ ಹಣ ರಾಜ್ಯಕ್ಕೆ ಕೊಡಲು ನಿರ್ಧರಿಸಲಾಗಿತ್ತು. ಆದರೆ, 15 ನೇ ಹಣಕಾಸು ಆಯೋಗದ ಅಧ್ಯಕ್ಷರಿಗೆ ನಿರ್ಮಲಾ ಸೀತಾರಾಮನ್ ಪತ್ರ ಬರೆದು ಈ ಹಣ ಕರ್ನಾಟಕಕ್ಕೆ ಕೊಡಬೇಡಿ ಅಂದ್ರು. ಅವರ ಪತ್ರದ ಹಿನ್ನೆಲೆಯಲ್ಲಿ ಆ ಹಣ ನಮ್ಮ ರಾಜ್ಯಕ್ಕೆ ಬರಲಿಲ್ಲ. ನಿರ್ಮಲಾ ಸೀತಾಮನ್ ನಮ್ಮ ರಾಜ್ಯದಿಂದ ಆಯ್ಕೆಯಾಗಿ ಹೋದವರು. ನಿರ್ಮಲಾ ಸೀತಾರಾಮನ್ ಹೀಗೆ ಮಾಡ್ತಾರೆ ಅಂತ ಅನ್ಕೊಂಡಿರಲಿಲ್ಲ. ಇದರ ಬಗ್ಗೆ ಕೇಂದ್ರ ಸರ್ಕಾರದ ಬಳಿ ಕೇಳಿದ್ದೀರಾ ಯಡಿಯೂರಪ್ಪ ಅವರೇ? ಎಂದು ಪ್ರಶ್ನಿಸಿದರು.