ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಸಂಬಂಧ ಬಂಧಿತರಾಗಿರುವ ನಟಿ ರಾಗಿಣಿ ಆಪ್ತ ಶ್ರೀನಿವಾಸ್ ಅಲಿಯಾಸ್ ಶ್ರೀಯ ಮುಖವಾಡ ಬಯಲಾಗಿದೆ. ಲಾಕ್‌ಡೌನ್ ಸಮಯದಲ್ಲಿ ಕೆಲವೊಮ್ಮೆ ಗಾಂಜಾ ಸಿಗದೇ ಇದ್ದ ಕಾರಣ, ಈತ ಗಾಂಜಾ ಗಿಡ ನೆಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಶ್ರೀನಿವಾಸ್ ಮನೆಯಲ್ಲಿ ಅರ್ಧ ಅಡಿಯಷ್ಟು ಎತ್ತರದ ಗಾಂಜಾ ಗಿಡಗಳು ಮತ್ತು 13 ಎಕ್ಸ್ಟಿಸಿ (ಮಾದಕ) ಮಾತ್ರೆಗಳು, 100 ಗ್ರಾಂ. ಗಾಂಜಾ, 1.1 ಗ್ರಾಂ ಎಂಡಿಎಂಎ, 1.5 ಗ್ರಾಂ ಹಾಶಿಶ್ ಪತ್ತೆಯಾಗಿವೆ. ತನ್ನ ವೈಯಕ್ತಿಕ ಬಳಕೆಗಾಗಿ ಗಾಂಜಾ ಗಿಡ ನೆಟ್ಟಿದ್ದಾಗಿ ಸಿಸಿಬಿ ತನಿಖಾಧಿಕಾರಿಗಳ ಎದುರು ಶ್ರೀ ಹೇಳಿದ್ದಾನೆ ಎನ್ನಲಾಗಿದೆ.
ಗಾಂಜಾ ಗಿಡ ಪತ್ತೆಯಾಗಿರುವ ಹಿನ್ನೆಲೆ ಆರೋಪಿಯ ಪೂರ್ವಾಪರ ತಿಳಿಯಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. ಗಾಂಜಾ ಗಿಡ ಎಲ್ಲಿಂದ ಖರೀದಿ ಮಾಡಿದ್ದ. ಯಾರು ಕೊಟ್ಟರು ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕ್ತಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಶ್ರೀನಿವಾಸ್ ಅಲಿಯಾಸ್ ಶ್ರೀ ಮತ್ತು ಪ್ರಕರಣದ A-5 ಆಗಿರುವ ವೈಭವ್ ಜೈನ್ನನ್ನ ಮುಖಾಮುಖಿ ಕೂರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಯಾಕೆಂದ್ರೆ, ಇವರಿಬ್ಬರೂ ಆಪ್ತರಾಗಿದ್ದು ಇನ್ನಷ್ಟು ಮಾಹಿತಿ ಹೊರ ಬರುವ ಸಾಧ್ಯತೆಯಿದೆ.