ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ನಾಟಕ ಅಕಾಡೆಮಿ, ಕೊಡವ ಅಕಾಡೆಮಿ ಸೇರಿದಂತೆ ಎಲ್ಲಾ ಸಾಂಸ್ಕೃತಿಕ ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರ ನೇಮಕ ರದ್ದು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಹೈಕೊರ್ಟ್ ಆದೇಶಿಸಿದೆ.
ನಾಟಕ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಜೆ.ಲೋಕೇಶ್, ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪಿ.ಕೆ ಪೊನ್ನಪ್ಪ ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು ಅಕಾಡೆಮಿಗಳ ನಿಯಮಾವಳಿ ಬೈ-ಲಾ ಪ್ರಕಾರ ಹಾಗೂ ಬರಗೂರು ರಾಮಚಂದ್ರಪ್ಪ ಸರ್ಕಾರಕ್ಕೆ ನೀಡಿರುವ ಸಾಂಸ್ಕೃತಿಕ ನೀತಿಯ ವರದಿಯಲ್ಲಿ ಸರ್ಕಾರಗಳು ಬದಲಾದರೂ ಅಕಾಡಮಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಮುಂದುವರಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಆದರೂ, ಬಿಜೆಪಿ ಸರ್ಕಾರ ರಚನೆಯಾದ ಮೂರೇ ದಿನಕ್ಕೆ ಎಲ್ಲಾ ಅಕಾಡಮಿಗಳ ಅಧ್ಯಕ್ಷರ ನೇಮಕಾತಿ ಹಿಂದಕ್ಕೆ ಪಡೆಯಲಾಗಿದೆ. ಈ ಹಿನ್ನೆಲೆ ನ್ಯಾಯಾಲಯದಲ್ಲಿ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು, ರಾಜ್ಯ ಸರ್ಕಾರ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ, ನಿರ್ದೇಶಕರು, ರಾಜ್ಯ ನಾಟಕ ಅಕಾಡಮಿ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.