ಬೆಂಗಳೂರು: ವಿದ್ಯುತ್ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2 ಸಾವಿರ ಇಂಜಿನಿಯರ್ಗಳ ಭವಿಷ್ಯದ ದೃಷ್ಟಿಯಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಹುದ್ದೆಗೆ ನೇರ ನೇಮಕಾತಿಯನ್ನು ರದ್ದುಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನಗರದ ಕರ್ನಾಟಕ ವಿದ್ಯುತ್ ಶಕ್ತಿ ಮಂಡಳಿ ಇಂಜಿನಿಯರ್ಗಳ ಸಂಘದ ವತಿಯಿಂದ ಆಯೋಜಿಸಲಾದ ಸುವರ್ಣ ಮಹೋತ್ಸವ ಸಂಸ್ಕರಣಾ ಉಪನ್ಯಾಸ ಹಾಗೂ 2020ರ ತಾಂತ್ರಿಕ ದಿನಚರಿ ಮತ್ತು ಕವಿಪ್ರನಿನಿಯ 2020 ರ ಕ್ಯಾಲೆಂಡ್ ಬಿಡುಗಡೆ ಸಮಾರಂಭದಲ್ಲಿ ತಾಂತ್ರಿಕ ದಿನಚರಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2 ಸಾವಿರ ಇಂಜಿನಿಯರ್ಗಳ ಭವಿಷ್ಯದ ದೃಷಿಯಿಂದ ಸಹಾಯಕ ಕಾರ್ಯನಿರ್ವಹಕ ಅಭಿಯಂತರರ ಹುದ್ದೆಗೆ ನೇರ ನೇಮಕಾತಿಯನ್ನು ರದ್ದುಪಡಿಸಿ, ಸುಮಾರು 9 ರಿಂದ 13 ವರ್ಷಗಳ ಕಾಲ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಇಂಜಿನಿಯರ್ಗಳಿಗೆ ಪದೋನ್ನತಿ ನೀಡಲು ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ನಿರ್ಧಾರವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.
ಇದರಿಂದ ರಾಜ್ಯದ ಜನತೆಗೆ ಹಾಗೂ ನಿಗಮಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ರಾಜ್ಯಾದ್ಯಂತ ಏಕರೂಪದ ಕಾಯಿದೆಯನ್ನು ಕಾನೂನು ಮತ್ತು ನೀತಿ ನಿಯಮಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ. ಮತ್ತು ರಾಜ್ಯದ ಜನತೆಗೆ ಕಡಿಮೆ ದರದಲ್ಲಿ ವಿದ್ಯುತ್ ವಿತರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಬೇಡಿಕೆಗಳ ಬಗ್ಗೆ ಮುಂದಿನ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಈಡೇರಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕಿ, ಡಾ. ಎನ್ ಮಂಜುಳ, ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನೀಯರುಗಳ ಸಂಘದ ಅಧ್ಯಕ್ಷರಾದ ಇಂ. ಶಿವಪ್ರಕಾಶ್ ಟಿ. ಎಂ ಸೇರಿದಂತೆ ಹಲವರು ಭಾಗವಹಿಸಿದ್ದರು.