ಬೆಂಗಳೂರು: ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕ 1.12 ಲಕ್ಷ ಜನರು ಸಹಾಯವಾಣಿಗೆ ಕರೆ ಮಾಡಿ, ಆಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಇವರ ಬೇಡಿಕೆಗಳನ್ನು ಪೂರೈಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಲಾಕ್‌ಡೌನ್ ಅವಧಿಯಲ್ಲಿ ಬಡವರಿಗೆ, ಕಾರ್ಮಿಕರಿಗೆ ಆಹಾರ ಭದ್ರತೆ ಕಲ್ಪಿಸಬೇಕು ಎಂದು ಕೋರಿ ವಿವಿಧ ಕಾರ್ಮಿಕ ಸಂಘಟನೆಗಳು ಮತ್ತು ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸರ್ಕಾರದ ಪರ ವಕೀಲರು ಮಾಹಿತಿ ನೀಡಿ, ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರು, ನಿರಾಶ್ರಿತರಿಗೆ ಅಗತ್ಯ ಆಹಾರ ಮತ್ತು ಆಹಾರ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ.
ಕಾರ್ಮಿಕರ ಹಸಿವು ನೀಗಿಸಲು ಹೆಲ್ಪ್ ಲೈನ್ ನಂ. 155214 ನೀಡಲಾಗಿದೆ. ಈ ಸಂಖ್ಯೆಗೆ ಈವರೆಗೆ 1,12,039 ಕರೆಗಳು ಬಂದಿದ್ದು, 57,353 ಜನರಿಂದ ಸಿದ್ದ ಆಹಾರಕ್ಕೆ ಬೇಡಿಕೆ ಬಂದಿದೆ. ಅದೇ ರೀತಿ 26,345 ಜನರಿಂದ ಪಡಿತರ ಧಾನ್ಯಕ್ಕೆ ಬೇಡಿಕೆ ಕರೆ ಬಂದಿದೆ. ಕರೆಗಳನ್ನು ಆಧರಿಸಿ ಅರ್ಹರಿಗೆ ಅವರ ಬೇಡಿಕೆಯಂತೆ ಪೂರೈಕೆ ಮಾಡಲಾಗಿದೆ. ಸಿದ್ದ ಆಹಾರ ಒದಗಿಸಲು ಖಾಸಗಿ ಸಂಸ್ಥೆಗಳ ನೆರವು ಪಡೆದುಕೊಳ್ಳಲಾಗುತ್ತಿದೆ.
ಈ ಸೇವೆಗೆ ಸ್ವಯಂ ಸೇವಕರೂ ನೋಂದಾಯಿಸಿಕೊಳ್ಳಬಹುದಾಗಿದೆ. ಆಹಾರದ ಬೇಡಿಕೆಗಳು ಬಂದಾಗ ಅವುಗಳನ್ನು ದಾಖಲಿಸಿಕೊಂಡು ಸಂಬಂಧಪಟ್ಟ ವಿಭಾಗಕ್ಕೆ ವರ್ಗಾಯಿಸಿ ಆಹಾರ ಪೂರೈಕೆ ಮಾಡಲಾಗುತ್ತಿದೆ. ಅದೇ ರೀತಿ ನಿರಾಶ್ರಿತರು ಮತ್ತು ಕಾರ್ಮಿಕರಿಗೆ ಅಗತ್ಯ ಆಹಾರ ಪೂರೈಸಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ ಎಂದು ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.