ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸುಳಿವು ನೀಡಿದ್ದು, ದೀಪಾವಳಿಯ ನಂತರದಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಬರುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದು ಮಾತುಕತೆ ನಡೆಯಲಿದೆ ಎಂದು ಹೇಳಿದರು.
ಭಾರತ್ ಜೋಡೋ ಬಿಜೆಪಿಗೆ ಅನುಕೂಲ: ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಭಯವಾಗಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿ, ಹೌದು. ನಾವು ವಿಚಲಿತರಾಗಿದ್ದಕ್ಕೆ ಗೋವಾದಲ್ಲಿ ಕೈ ನಾಯಕರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಭಾರತ್ ಜೋಡೋ ಆಗುತ್ತಿದ್ದಂತೆ ರಾಜಸ್ಥಾನದಲ್ಲೂ ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಹೋಗಲು ತಯಾರಾಗಿದ್ದಾರೆ. ಜೋಡೋ ಅಂತಾ ಹೆಸರಿಟ್ಟುಕೊಂಡು ಯಾತ್ರೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಚೋಡೋ ನಡೆಯುತ್ತಿದೆ. ಅದನ್ನು ಮುಚ್ಚಿಕೊಳ್ಳಲು ಈ ಯಾತ್ರೆ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಯಾತ್ರೆ ಹೋದಲ್ಲೆಲ್ಲ ಬಿಜೆಪಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬೊಮ್ಮಾಯಿ ಮತ್ತು ಹೈಕಮಾಂಡ್ ನಿರ್ಧಾರ: ಆರ್ ಅಶೋಕ್