ಬೆಂಗಳೂರು: ಮಕರ ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆಯಾಗಲಿದೆ. ಈ ಹಿಲ್ಲೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಿಎಂ ಯಡಿಯೂರಪ್ಪ ಜೊತೆ ಮಂತ್ರಿಗಿರಿಗಾಗಿ ಕಸರತ್ತು ಮುಂದುವರೆಸಿದ್ದಾರೆ.
ಉಮೇಶ್ ಕತ್ತಿ ಪದೇಪದೆ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುತ್ತಿದ್ದಾರೆ. ಇಂದು ಮತ್ತೊಮ್ಮೆ ಡಾಲರ್ಸ್ ಕಾಲೋನಿಯ ಸಿಎಂ ಬಿಎಸ್‌ವೈ ನಿವಾಸಕ್ಕೆ ಆಗಮಿಸಿದ ಕತ್ತಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರ ಜೊತೆಗೆ ಬಿಎಸ್‌ವೈ ನಿವಾಸಕ್ಕೆ ಮಾಜಿ ಸಚಿವರಾದ ಆರ್.ಶಂಕರ್ ಹಾಗೂ ಎಂಟಿಬಿ ನಾಗರಾಜ್ ಕೂಡ ಭೇಟಿ ನೀಡಿ ಸಚಿವ ಸ್ಥಾನಕ್ಕಾಗಿ ತಮ್ಮ ಲಾಬಿ ನಡೆಸಿದ್ದಾರೆ. ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಪರಿಗಣಿಸುವಂತೆ ಸಿಎಂಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಅನರ್ಹ ಶಾಸಕ ಆರ್.ಶಂಕರ್ನ್ನು ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಹೀಗಾಗಿ ವಿಧಾನ ಪರಿಷತ್ನಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್‌ರಿಂದ ತೆರವಾದ ಎಂಎಲ್‌ಸಿ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಒತ್ತಡ ಹೇರಿದ್ದಾರೆ ಎಂದು ಹೇಳಲಾಗ್ತಿದೆ.
ಆದರೆ, ವಿಧಾನ ಪರಿಷತ್ನಲ್ಲಿ ಉಳಿದಿರುವ ಒಂದು ಸ್ಥಾನವನ್ನು ಡಿಸಿಎಂ ಲಕ್ಷಣ ಸವದಿಗೆ ನೀಡಲು ಸಿಎಂ ಒಲವು ತೋರಿಸಿದ್ದಾರೆ. ಸವದಿ ಡಿಸಿಎಂ ಸ್ಥಾನ ಉಳಿಯಬೇಕಾದರೆ ಆರು ತಿಂಗಳ ಒಳಗಾಗಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಬೇಕು. ಈ ಅವಧಿ ಈಗಾಗಲೇ ಮುಗಿಯುತ್ತಾ ಬಂದಿದೆ. ಹೀಗಾಗಿ ಸವದಿ ಸ್ಥಾನವನ್ನು ಭದ್ರಪಡಿಸಲು ಸಿಎಂ ಯೋಚಿಸಿದ್ದಾರೆ. ಆದರೆ, ಪರಿಷತ್ ಸ್ಥಾನವನ್ನು ತನಗೇ ನೀಡಬೇಕು ಎಂದು ಆರ್.ಶಂಕರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.