ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ ಹೆಚ್ಚಾಗಿದ್ದು, ನೆರೆ ಹಾವಳಿ ಪ್ರದೇಶಗಳಿಗೆ ಸಚಿವರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ವಿಷಯವನ್ನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ನಾಳೆಯಿಂದ ನೆರೆ ಪೀಡಿತ ಪ್ರದೇಶಗಳಿಗೆ ಸಚಿವರ ತಂಡ ಹೋಗಿ, ಅಲ್ಲಿನ ಪರಿಹಾರ ಕಾಮಗಾರಿ, ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಕಾನೂನು ಸಚಿವ ಮಾಧು ಸ್ವಾಮಿ ತಿಳಿಸಿದರು. ಅಲ್ಲಿಗೆ ಭೇಟಿ ನೀಡಿ ಎರಡು ಮೂರು ದಿನಗಳಲ್ಲಿ ವರದಿ ತಯಾರಿಸಿ ಸರ್ಕಾರದ ಮುಂದಿಡಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.
ಇನ್ನು ವಿದ್ಯಾರ್ಥಿಗಳಿಗೆ ಈ ವರ್ಷ ಎರಡನೇ ಸೆಟ್ ಉಚಿತ ಸಮವಸ್ತ್ರ ವಿತರಿಸಲು ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ.
ಸಂಪುಟದ ಪ್ರಮುಖ ತೀರ್ಮಾನಗಳು:
- ಕೃಷಿ ಸಹಕಾರ ಮಾರಾಟ ಮಂಡಳಿಗೆ ರಸಗೊಬ್ಬರ ಖರೀದಿಗಾಗಿ ₹400 ಕೋಟಿ ಸಾಲ ಪಡೆಯುವುದಕ್ಕಾಗಿ ಸರ್ಕಾರಿ ಖಾತ್ರಿ ನೀಡಲು ಒಪ್ಪಿಗೆ
- ನಿರ್ಭಯ ನಿಧಿಯಡಿ ಬೆಂಗಳೂರಿನ ನಗರದಲ್ಲಿ ಸುರಕ್ಷಿತ ನಗರ ವಿಸ್ತೃತ ಯೋಜನೆಗೆ ₹667 ಕೋಟಿ ಅನುಮೋದನೆ
- ಕರ್ನಾಟಕ ರಾಜ್ಯ ಭಾಷಾ ತಿದ್ದುಪಡಿ ಮಸೂದೆಗೆ ಅನುನೋದನೆ. ಯಾವುದೇ ವಿಧೇಯಕ ಕನ್ನಡದಲ್ಲಿ ಮಾಡಿದರೆ ಅದನ್ನು ರಾಜ್ಯಪಾಲರಿಗೆ ಕಳುಹಿಸಿ ಅನುಮೋದನೆ ಮಾಡಿ ಬರಬೇಕಾಗಿತ್ತು. ಈಗ ಅದನ್ನು ಇಲಾಖಾ ಮಟ್ಟದಲ್ಲೇ ಮಾಡಲು ತಿದ್ದುಪಡಿ ವಿಧೇಯಕ ತರಲು ನಿರ್ಧಾರ
- ನಗರ ಪ್ರದೇಶಗಳಲ್ಲಿನ 1,000 ಅಂಗನವಾಡಿ ಕಟ್ಟಡಗಳ ದುರಸ್ತಿ ಕಾರ್ಯಕ್ಕೆ ₹ 10 ಕೋಟಿ ರೂ.ಗೆ ಅಸ್ತು
- ಉಪ ಚುನಾವಣೆ ನಡೆಯಲಿರುವ ನಗರ ಹಾಗೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ, ಆ ಕ್ಷೇತ್ರಕ್ಕೆ ಮಾತ್ರ ನೀತಿ ಸಂಹಿತೆ ಅನ್ವಯವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಯಾವುದಾದರೂ ಕ್ಷೇತ್ರದಲ್ಲಿ ಚುನಾವಣೆ ನಡೆದರೆ ಇಡೀ ಜಿಲ್ಲೆಗೆ ನೀತಿ ಸಂಹಿತೆ ಅನ್ವಯವಾಗುತ್ತದೆ. ನ.11 ತಾರೀಕಿನಿಂದ ಈ ನೀತಿ ಸಂಹಿತೆ ಜಾರಿಯಾಗುತ್ತದೆ.
- ಬೆಂಗಳೂರಿನ ಕೆಎಸ್ಆರ್ಪಿಗೆ ಸೇರಿದ ಖಾಲಿ ಜಾಗದಲ್ಲಿ ₹ 80 ಕೋಟಿ ವೆಚ್ಚದಲ್ಲಿ ಪೊಲೀಸ್ ಭವನ ಕಟ್ಟಲು ಅನುಮೋದನೆ
- ಗುಲ್ಬರ್ಗಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸ್ಥಳೀಯ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವ ನಿಟ್ಟಿನಲ್ಲಿ ತಿದ್ದುಪಡಿಗೆ ಅನುಮೋದನೆ. ಇಲ್ಲಿವರೆಗೆ ಮಂತ್ರಿಗಳಿಗೆ ಮಾತ್ರ ಅಧ್ಯಕ್ಷರಾಗುವ ಅವಕಾಶ ಇತ್ತು.