ಬೆಂಗಳೂರು: ಹಲವು ಕಾರಣಗಳಿಂದ ಮುಂದೂಡಿಕೆಯಾಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಾಳೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ವೇಳೆ ನಡೆಯುತ್ತಿರುವ ಈ ಸಭೆ ಮಹತ್ವ ಪಡೆದುಕೊಂಡಿದೆ.
ಅರಮನೆ ಮೈದಾನದ ತ್ರಿಪುರ ವಾಸಿನಿ, ಗೇಟ್ ನಂ. 2 ರಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಸಿದ್ಧತೆಯನ್ನು ಬಿಜೆಪಿ ನಾಯಕರು ಪರಿಶೀಲನೆ ನಡೆಸಿದರು. ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ನಾಳೆ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಪ್ರಭಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಪಕ್ಷದ ಎಲ್ಲ ಕೋರ್ ಕಮಿಟಿ ಸದಸ್ಯರು, ಸಹ ಪ್ರಭಾರಿ ಡಿ. ಕೆ ಅರುಣಾ ಸೇರಿದಂತೆ 592 ಜನ ರಾಜ್ಯ ಕಾರ್ಯಕಾರಿಣಿಯ ಅಪೇಕ್ಷಿತ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಹಾಲಿ ಸಂಸದರು, ಹಾಲಿ ಶಾಸಕರು, ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ರಾಜ್ಯ ಅಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರು, ಜಿಲ್ಲೆ, ವಿಭಾಗಗಳ ಪ್ರಭಾರಿಗಳು, ಜಿಲ್ಲಾ ಬಿಜೆಪಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಈ ರಾಜ್ಯ ಕಾರ್ಯಕಾರಿಣಿಯ ಅಪೇಕ್ಷಿತ ಸದಸ್ಯರಾಗಿದ್ದಾರೆ.

ಸಶಕ್ತ ಭಾರತದ ಉದ್ದೇಶ: ಬೆಳಗ್ಗೆಯಿಂದ ಸಂಜೆವರೆಗೆ ಸಂಘಟನಾತ್ಮಕ ವಿಚಾರಗಳ ಚರ್ಚೆ ನಡೆಯಲಿದೆ. ರಾಜಕೀಯ ವಿಶ್ಲೇಷಣೆ, ಕೇಂದ್ರ ಸರ್ಕಾರದ ಯೋಜನೆಗಳು, ನಿರ್ಣಯ ಮತ್ತು ಸಮಾರೋಪ ನಡೆಯಲಿದೆ. ಪ್ರಶ್ನೋತ್ತರ ಕೂಡ ಇರಲಿದೆ. ಸಶಕ್ತ ಭಾರತ ಅನ್ನೋ ಉದ್ದೇಶ ಇಟ್ಟುಕೊಂಡು ಹೋಗುತ್ತಿದ್ದೇವೆ. ಭಾರತ ಸಶಕ್ತವಾಗಲು ಕರ್ನಾಟಕ ಹಲವು ಕೊಡುಗೆ ನೀಡುತ್ತಾ ಬಂದಿದೆ.
ಬಿಜೆಪಿ ಕೂಡ ದೇಶ ಸಶಕ್ತವಾಗಲು ಹಲವು ರೀತಿಯಲ್ಲಿ ಮುಂದಾಗಿದೆ. ಭಾರತದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶ ಹೇಗಿರಬೇಕು ಅನ್ನೋ ರೋಡ್ ಮ್ಯಾಪ್ ಮಾಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ರೋಡ್ ಮ್ಯಾಪ್ ಇಟ್ಟುಕೊಂಡೇ ಅಜೆಂಡಾ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.
ಸಾವರ್ಕರ್ ಜೀವನ ಚಿತ್ರಣ: ಇನ್ನು ಈ ಬಾರಿಯ ಕಾರ್ಯಕಾರಿಣಿ ಸಭೆ ಆಯೋಜನೆಗೊಂಡಿರುವ ಸ್ಥಳದಲ್ಲಿ ಪ್ರದರ್ಶನ ಕೂಡ ಇರಲಿದೆ. ವೀರ ಸಾವರ್ಕರ್ ಪ್ರತಿಕೃತಿ ನಿರ್ಮಿಸಿದ್ದು, ಕರಿನೀರಿನಿ ಕಾಲಾಪಾನಿ ಶಿಕ್ಷೆ ಅನುಭವಿಸಿದ ಜೈಲು ಕಟ್ಟಡದ ಮಾದರಿಯನ್ನು ನಿರ್ಮಿಸಲಾಗಿದೆ. ಅದರಲ್ಲಿ ಸಾವರ್ಕರ್ ಜೀವನ ಚಿತ್ರಣ ಅನಾವರಣಗೊಳಿಸಲಾಗಿದೆ.
ಓದಿ: ಕೃಷಿ ಡಿಜಿಟಲೀಕರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯ: ಸಿಎಂ ಬೊಮ್ಮಾಯಿ