ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಎಬ್ಬಿಸುವ ಪ್ರಯತ್ನ ನಡೆಸಿದ್ದ ಸಚಿವ ಸಿ.ಪಿ ಯೋಗೀಶ್ವರ್ ಹಾಗೂ ಶಾಸಕ ಅರವಿಂದ ಬೆಲ್ಲದ್ ಹೈಕಮಾಂಡ್ ಭೇಟಿ ಮಾಡದೆ ಬರಿಗೈಲಿ ರಾಜ್ಯಕ್ಕೆ ವಾಪಸಾಗಿದ್ದಾರೆ ಎನ್ನಲಾಗಿದೆ.
ವರಿಷ್ಠರನ್ನು ಭೇಟಿ ಮಾಡಬೇಕು ಎಂದು ನವದೆಹಲಿಗೆ ತೆರಳಿದ್ದ ಸಚಿವ ಸಿ.ಪಿ ಯೋಗೀಶ್ವರ್ ಹಾಗೂ ಶಾಸಕ ಅರವಿಂದ ಬೆಲ್ಲದ್, ಕರ್ನಾಟಕ ಭವನದ ಬದಲು ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಹೈಕಮಾಂಡ್ ನಾಯಕರ ಭೇಟಿ ವಿಷಯ ಯಾರಿಗೂ ತಿಳಿಯದಿರಲಿ ಎನ್ನುವುದು ಇದರ ಹಿಂದಿನ ಉದ್ದೇಶ ಎನ್ನಲಾಗಿದೆ.
ಆದರೆ, ಸಿಎಂ ವಿರುದ್ಧ ದೂರು ನೀಡಲು ಹೋಗಿದ್ದ ರಾಜ್ಯದ ನಾಯಕರಿಗೆ ವರಿಷ್ಠರ ಭೇಟಿ ಸಾಧ್ಯವಾಗಿಲ್ಲ. ಸತತ ಪ್ರಯತ್ನ ನಡೆಸಿದರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಬ್ಬರೂ ಕೂಡ ಸಮಯಾವಕಾಶವನ್ನು ನೀಡಲಿಲ್ಲ ಎಂದು ತಿಳಿದು ಬಂದಿದೆ.
ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರೂ, ಖಾತೆ ಹಾಗು ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಮುನಿಸಿಕೊಂಡಿರುವ ಯೋಗೀಶ್ವರ್ ಇದೀಗ ಸಿಎಂ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿದ್ದು, ಈಗಾಗಲೇ ಒಮ್ಮೆ ಹೈಕಮಾಂಡ್ಗೆ ದೂರನ್ನು ನೀಡಿದ್ದರು.
ಈ ಹಿನ್ನೆಲೆ, ಅನಗತ್ಯವಾಗಿ ಭೇಟಿಗೆ ಕಾಲವಕಾಶ ನೀಡಿ ನಾಯಕತ್ವ ಬದಲಾವಣೆ ಕೂಗಿಗೆ ನೀರೆರೆಯುವುದು ಬೇಡ ಎಂದು ಯೋಗೀಶ್ವರ್ ಹಾಗೂ ರೆಬೆಲ್ ನಾಯಕ ಅರವಿಂದ ಬೆಲ್ಲದ್ ಇಬ್ಬರಿಗೂ ಭೇಟಿಗೆ ಕಾಲಾವಕಾಶ ನೀಡಲಿಲ್ಲ ಎನ್ನಲಾಗಿದೆ.
ವರಿಷ್ಠರ ಭೇಟಿಗೆ ಕಾದು ಕಾದು ಕಡೆಗೆ ಸಾಧ್ಯವಾಗದೆ ಉಭಯ ನಾಯಕರು ಬೆಂಗಳೂರಿಗೆ ಬರಿಗೈಲಿ ವಾಪಸಾಗಿದ್ದಾರೆ. ಈ ನಾಯಕರ ಮುಂದಿನ ನಡೆ ಏನು ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಕೊರೊನಾ ಕಾಲದಲ್ಲಿ ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಗುಸು ಗುಸು: ವರಿಷ್ಠರ ಪ್ಲಾನ್ ಏನು?
ಸದ್ಯ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಜೂನ್ 7 ರವರೆಗೂ ಇರುವ ಲಾಕ್ಡೌನ್ ವಿಸ್ತರಣೆ ಆಗಬಹುದು ಅಥವಾ ಕಠಿಣ ಮಾರ್ಗಸೂಚಿ ಮುಂದುವರೆಸಿ ಫ್ರೀಡೌನ್ ಪ್ರಕ್ರಿಯೆಗೆ ಮುಂದಾಗಬಹುದು. ಆದರೆ, ಈಗಾಗಲೇ ವಿಧಿಸಿರುವಂತೆ ರಾಜಕೀಯ, ಧಾರ್ಮಿಕ ಸಭೆ, ಸಮಾರಂಭಕ್ಕೆ ನಿರ್ಬಂಧ ಮುಂದುವರೆಯಲಿದೆ. ಹಾಗಾಗಿ, ಜೂನ್ ತಿಂಗಳಿನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುವುದೂ ಕೂಡ ಅನುಮಾನವಾಗಿದೆ.