ಬೆಂಗಳೂರು: ಸಚಿವ ಸ್ಥಾನ ಸಿಗದ ಅಸಮಾಧಾನಿತರು ಪ್ರತ್ಯೇಕ ಸಭೆ ನಡೆಸಲು ಮುಂದಾಗಿರುವ ಹಿನ್ನೆಲೆ, ಆ ಸಭೆಯ ನೇತೃತ್ವ ವಹಿಸುತ್ತಿರುವ ಶಾಸಕ ಅರವಿಂದ ಬೆಲ್ಲದ್ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತುಕತೆ ನಡೆಸಿದರು.
ಅತೃಪ್ತ ಶಾಸಕ ಅರವಿಂದ ಬೆಲ್ಲದ್ ಮನವೊಲಿಸುವ ಕಾರ್ಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೆಗಲಿಗೆ ಹೊರಿಸಿದ್ದಾರೆ. ಹೀಗಾಗಿ, ಅತೃಪ್ತರಿಗೆ ಕರೆ ಮಾಡಿದ ಬಸವರಾಜ ಬೊಮ್ಮಾಯಿ, ಸಿಎಂ ಸಾಹೇಬ್ರು ನಿಮ್ಮನ್ನು ಬರಲು ಹೇಳಿದ್ದಾರೆ. ನನ್ನ ಮನೆಗೆ ಬನ್ನಿ. ಒಟ್ಟಿಗೆ ಸಿಎಂ ಬಳಿ ಹೋಗೋಣ ಎಂದಿದ್ದಾರೆ. ಬೊಮ್ಮಾಯಿ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಹೋದ ಶಾಸಕರು ಕೆಲಕಾಲ ಸಮಾಲೋಚನೆ ನಡೆಸಿ, ನಂತರ ಗೃಹ ಸಚಿವರ ಜೊತೆಯಲ್ಲೇ ಸಿಎಂ ಭೇಟಿಗೆ ತೆರಳಿದರು.
ಸಿಎಂ ಭೇಟಿಗೂ ಮುನ್ನ ಗೃಹ ಕಚೇರಿ ಕೃಷ್ಣಾದಲ್ಲಿ ಕೆಲಕಾಲ ಶಾಸಕ ಬೆಲ್ಲದ್ ಮತ್ತು ನಾಗೇಶ್ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದರು. ನಂತರ ಸಿಎಂ ಜೊತೆ ಸಮಾಲೋಚನೆ ನಡೆಸಿದ್ದರು.
ಉಭಯ ಶಾಸಕರ ಜೊತೆ ಮಾತುಕತೆ ನಡೆಸಿದ ಸಿಎಂ ಯಡಿಯೂರಪ್ಪ ನಾಳೆ ಮಾತುಕತೆ ನಡೆಸೋಣ, ಪ್ರತ್ಯೇಕ ಸಭೆಯಂತಹ ಚಟುವಟಿಕೆ ಮಾಡುವುದು ಬೇಡ ಎಂದು ತಿಳಿಸಿದ್ದಾರೆ.