ಬೆಂಗಳೂರು: ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ನೂತನ ಜಿಲ್ಲೆ ರಚಿಸುವ ಪ್ರಯತ್ನದ ಜೊತೆಗೆ ಸದ್ದಿಲ್ಲದೇ ಮತ್ತೆರಡು ಹೊಸ ಜಿಲ್ಲೆಗಳನ್ನು ರಚಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ.
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿರುವ ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿಯನ್ನು ವಿಭಜಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. 14 ತಾಲೂಕುಗಳನ್ನು ಹೊಂದಿರುವ ಬೆಳಗಾವಿ ಸದ್ಯ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಬೆಂಗಳೂರಿನ ನಂತರ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರ ಹೊಂದಿರುವ ಜಿಲ್ಲೆಯಾಗಿದೆ.
ರಾಜಕೀಯವಾಗಿ ಸಾಕಷ್ಟು ಪ್ರಭಾವ ಹೊಂದಿರುವ ಈ ಜಿಲ್ಲೆಯನ್ನು ಇದೀಗ ವಿಭಜನೆ ಮಾಡಿ ಚಿಕ್ಕೋಡಿಯನ್ನು ಹೊಸ ಜಿಲ್ಲೆಯಾಗಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ 14 ತಾಲೂಕುಗಳಲ್ಲಿ 8 ತಾಲೂಕುಗಳನ್ನು ಉಳಿಸಿಕೊಂಡು ಉಳಿದ 6 ತಾಲೂಕುಗಳನ್ನು ಸೇರಿಸಿ ಚಿಕ್ಕೋಡಿಯನ್ನು ಜಿಲ್ಲೆ ಮಾಡುವ ಯೊಜನೆ ರೂಪಿಸಲಾಗಿದೆಯಂತೆ.
ಜಾರಕಿಹೊಳಿ ಸಹೋದರರ ಕೈಯಿಂದ ಜಿಲ್ಲೆಯ ಹಿಡಿತ ಕಡಿಮೆ ಮಾಡುವ ಜೊತೆಯಲ್ಲಿ, ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿರುವ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾದರೆ ಜಿಲ್ಲೆಯಲ್ಲಿ ಹಿಡಿತ ಹೊಂದಲಿದ್ದಾರೆ. ಹಾಗಾಗಿ ಶಾಸಕ ಕತ್ತಿ ವೋಲೈಕೆಯೂ ಇದರ ಹಿಂದಿದ್ದು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಕ್ಕೆ ಸಿಎಂ ಮುಂದಾಗಿದ್ದಾರೆ ಎನ್ನಲಾಗ್ತಿದೆ.
ಈಗಾಗಲೇ ಶೈಕ್ಷಣಿಕ ಜಿಲ್ಲೆಯಾಗಿರುವ ಚಿಕ್ಕೋಡಿಯನ್ನು ಕಂದಾಯ ಜಿಲ್ಲೆಯನ್ನಾಗಿ ಮಾಡುವುದು ಅಷ್ಟು ಸಮಸ್ಯೆಯಾಗುವುದಿಲ್ಲ ಎನ್ನುವ ಕಾರಣಕ್ಕೆ ವಿಜಯನಗರದ ಜೊತೆಯಲ್ಲಿಯೇ ಚಿಕ್ಕೋಡಿ ಜಿಲ್ಲೆ ಪ್ರಸ್ತಾಪ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಶಿವಮೊಗ್ಗ ಜಿಲ್ಲೆಯಿಂದ ಸಿಎಂ ಬಿಎಸ್ವೈ ಸ್ವಕ್ಷೇತ್ರ ಶಿಕಾರಿಪುರವನ್ನು ಪ್ರತ್ಯೇಕಿಸಿ, ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ ಕೆಲ ತಾಲೂಕುಗಳನ್ನು ಸೇರಿಸಿ ಶಿಕಾರಿಪುರವನ್ನು ನೂತನ ಜಿಲ್ಲೆಯನ್ನಾಗಿಸುವ ಕುರಿತು ಚಿಂತನೆ ನಡೆದಿದೆ. ಇದಕ್ಕೆ ಪೂರಕ ಎನ್ನುವಂತೆ ಯಡಿಯೂರಪ್ಪ ಅಂದು ಉಪ ಮುಖ್ಯಮಂತ್ರಿ ಆಗಿದ್ದ ಅವಧಿಯಿಂದಲೇ ಜಿಲ್ಲಾ ಕೇಂದ್ರಕ್ಕೆ ಬೇಕಿರುವ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಿಕೊಂಡು ಬಂದಿದ್ದಾರೆ. ಹಾಗಾಗಿ ಈಗ ಮುಖ್ಯಮಂತ್ರಿ ಸ್ಥಾನದಲ್ಲಿರುವ ವೇಳೆಯಲ್ಲಿಯೇ ಸ್ವಕ್ಷೇತ್ರವನ್ನು ಜಿಲ್ಲೆಯನ್ನಾಗಿ ಮಾಡಿದರೂ ಅಚ್ಚರಿ ಇಲ್ಲ.
ವಿಜಯನಗರ ಜಿಲ್ಲೆ ರಚನೆ ಖಂಡಿಸಿ ಇಂದು ಬಳ್ಳಾರಿ ಬಂದ್ ಕರೆ ನೀಡಿದ್ದು, ಕೆಲ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಬಳ್ಳಾರಿ ಜಿಲ್ಲೆಯ ಶಾಸಕರು, ಸಂಸದರ ಸಭೆ ಕರೆದಿರುವ ಸಿಎಂ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ವಿಜಯನಗರ ನೂತನ ಜಿಲ್ಲೆ ರಚನೆ ಸಂಬಂಧ ನಿರ್ಧಾರ ಕೈಗೊಳ್ಳಲಿದ್ದಾರೆ.
ಅಕ್ಟೋಬರ್ 3 ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಂಪುಟ ಸಭೆಯಲ್ಲಿ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚಿಸುವ ವಿಷಯ ಮಂಡಿಸುವುದರ ಜೊತೆಯಲ್ಲಿ ಶಿಕಾರಿಪುರ ಮತ್ತು ಚಿಕ್ಕೋಡಿ ಜಿಲ್ಲೆ ನೂತನ ಜಿಲ್ಲೆ ರಚನೆ ವಿಷಯವೂ ಪ್ರಸ್ತಾಪವಾಗಲಿದೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದುಬಂದಿದೆ.