ಬೆಂಗಳೂರು: ದೇಶವನ್ನೆ ಬೆಚ್ಚಿಬೀಳಿಸಿದ್ದ, ಹೈದರಾಬಾದ್ನ ಪಶುವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು, ಪೊಲೀಸರು ಎನ್ಕೌಂಟರ್ ಮಾಡಿರುವ ವಿಚಾರವನ್ನು ರಾಜ್ಯ ಸರ್ಕಾರದ ಮುಖಂಡರು ಸ್ವಾಗತಿಸಿದ್ದಾರೆ. ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಹಾಗೂ ಸಚಿವ ಸಿಟಿ ರವಿ ಇದು ಕ್ರೌರ್ಯ ಮಾಡುವವರಿಗೆ ಕಠಿಣ ಸಂದೇಶ ನೀಡಿದಂತಾಗಿದೆ ಎಂದಿದ್ದಾರೆ.
ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡುವ ಮೂಲಕ, ಇಡೀ ದೇಶದಲ್ಲಿ ಸಂಚಲನ ಮೂಡಿಸಿದಂತಾಗಿದೆ. ಕಾನೂನಿನಲ್ಲಿ ತಿದ್ದುಪಡಿ ಮಾಡಿ, ಮರಣದಂಡನೆಗೆ ಅವಕಾಶ ಕೂಡಾ ಮಾಡಿಕೊಟ್ಟಿದ್ದಾರೆ. ಆದರೂ ತಡವಾಗಿ ಆಗುತ್ತೆ. ಇದು ತ್ವರಿತವಾಗಿ ಆಗಿದೆ. ಇದು ಒಳ್ಳೆಯ ಸಂದೇಶ. ಇದು ಒಳ್ಳೆಯ ಬೆಳವಣಿಗೆ. ಇದು ಕ್ರೌರ್ಯ ಮಾಡುವವರಿಗೆ ಎಚ್ಚರಿಕೆ ಗಂಟೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ಪ್ರತಿಕ್ರಿಯಿಸಿ, ದೇಶದ ಜನರ ಅಪೇಕ್ಷೆಯೂ ಇದೇ ಇತ್ತು. ಕಠಿಣ ಸಂದೇಶ ಹೋಗಬೇಕು ಎಂಬುದು. ತಾಯಿ, ಅಕ್ಕ, ತಂಗಿ ಸಂಬಂಧಗಳನ್ನು ಮರೆತು ಕಾಮುಕರಂತೆ, ಮೃಗಗಳಿಗಿಂತ ಕ್ರೂರವಾಗಿ ವರ್ತಿಸುವವರ ಬಗ್ಗೆ ಮಾನವೀಯ ನೆಲೆಯಲ್ಲಿ ಯೋಚನೆ ಮಾಡಬಾರದು ಅನ್ನುವಂತ ಭಾವನೆ ದೇಶದ ಜನರಿಗಿತ್ತು. ಅದರಂತೆ ಎಲ್ಲ ಅತ್ಯಾಚಾರ ಪ್ರಕರಣದಲ್ಲೂ ಇದೇ ಪ್ರತಿಕ್ರಿಯೆ ಸಿಗಬೇಕು. ಆ ರಾಜ್ಯದ ಪೊಲೀಸರನ್ನು ಅಭಿನಂದಿಸುತ್ತೇನೆ ಎಂದರು. ಇದಕ್ಕೆ ಕಾನೂನಿನ ತಿದ್ದುಪಡಿಯೂ ನಡೆಯುತ್ತಾ ಇದೆ. ಶಿಕ್ಷಣದಲ್ಲೂ ಈ ಬಗ್ಗೆ ಮಕ್ಕಳಿಂದಲೇ ಅರಿವು ಮೂಡಿಸಬೇಕು. ಸಮಾಜ ಇಂತಹ ಕೃತ್ಯಗಳನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಬರಬಾರದು ಎಂದರು.