ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದ ನಟೋರಿಯಸ್ ರೌಡಿಶೀಟರ್ನನ್ನು ಗೂಂಡಾ ಕಾಯ್ದೆಯಡಿ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಹೊಸಗುಡ್ಡಹಳ್ಳಿ ನಿವಾಸಿಯಾಗಿರುವ ಜಿಬ್ರಾನ್ ಬಂಧಿತ ವ್ಯಕ್ತಿ. ಈತ ಕೊಲೆ ಯತ್ನ, ದರೋಡೆ, ಹಲ್ಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಜೈಲಿನಿಂದ ಜಾಮೀನು ದೊರೆತ ಬಳಿಕ ನ್ಯಾಯಾಲಯದ ಮುಂದೆ ಗೈರುಹಾಜರಾಗಿ ತಲೆಮರೆಸಿಕೊಂಡಿದ್ದನು.
ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಈತನ ಮೇಲೆ ಗೂಂಡಾ ಕಾಯ್ದೆ ಪ್ರಯೋಗಿಸಿರುವ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಕಾಯ್ದೆಯಡಿ ಬಂಧಿತರಾದರೆ ಒಂದು ವರ್ಷದವರೆಗೂ ನ್ಯಾಯಾಲಯದಲ್ಲಿ ಜಾಮೀನು ಸಿಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಆಟವಾಡುತ್ತಿದ್ದ ವೇಳೆ ಮೊಬೈಲ್ ಬ್ಯಾಟರಿ ಸ್ಫೋಟ: ಹಾವೇರಿಯಲ್ಲಿ ಬಾಲಕನ ನಾಲ್ಕು ಬೆರಳು ತುಂಡು
ಆರೋಪಿ ಈ ಹಿಂದೆ ಜೆ.ಜೆ.ನಗರ ಮತ್ತು ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿ ಅನೇಕ ಬಾರಿ ಜೈಲಿಗೆ ಹೋಗಿದ್ದ. ಜಾಮೀನು ಪಡೆದು ಹೊರ ಬಂದು ನಿರಂತರ ಕಾನೂನುಬಾಹಿರ ಚಟುವಟಿಕೆಗೆ ಒಳಗಾಗುತ್ತಿದ್ದ.