ಬೆಂಗಳೂರು: ಆರ್.ಆರ್ ನಗರ ಹಾಗು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಬಿಜೆಪಿ ಕೋರ್ ಕಮಿಟಿಯ ಮಹತ್ವದ ಸಭೆ ಆರಂಭವಾಗಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಭಾಗಿಯಾಗಿದ್ದಾರೆ.
ಶಾಸಕ ಸ್ಥಾನಕ್ಕೆ ಮುನಿರತ್ನ ರಾಜೀನಾಮೆ ಜೊತೆಯಲ್ಲಿ ಚುನಾವಣಾ ತಕರಾರು ಅರ್ಜಿ ಇತ್ಯರ್ಥದಿಂದ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ಶುರುವಾಗಿದೆ.
ಆರ್ ಆರ್ ನಗರದಲ್ಲಿ ಮುನಿರತ್ನ ಹಾಗು ತುಳಸಿ ಮುನಿರಾಜುಗೌಡ ತೀವ್ರ ಪೈಪೋಟಿ ನಡೆಸುತ್ತಿದ್ದು ಯಾರಿಗೆ ಟಿಕೆಟ್ ನೀಡಬೇಕೆನ್ನುವ ಕುರಿತು ಚರ್ಚೆ ನಡೆಯುತ್ತಿದೆ. ಶಿರಾದಲ್ಲಿ ತಿಪ್ಪೇಸ್ವಾಮಿ, ರಾಜೇಶ ಗೌಡ, ಡಿ.ಕೆ. ಮಂಜುನಾಥ್, ಎಸ್.ಆರ್ ಗೌಡ, ಮಾಜಿ ಶಾಸಕ ಸುರೇಶ್ ಗೌಡ ಹೆಸರುಗಳು ಮುಂಚೂಣಿಯಲ್ಲಿದ್ದು ಟಿಕೆಟ್ ಯಾರಿಗೆ ಒಲಿಯಲಿದೆ ಎನ್ನುವ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ.
ಇದರ ಜೊತೆಯಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಸುಶೀಲ್ ನಮೋಶಿ ಮತ್ತು ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಎಸ್.ವಿ. ಸಂಕನೂರ್ ಹೆಸರನ್ನು ಅಂತಿಮಗೊಳಿಸಿ ಎರಡೂ ಕ್ಷೇತ್ರದಿಂದ ಒಂದೊಂದೇ ಹೆಸರನ್ನು ಈಗಾಗಲೇ ಪಕ್ಷದ ಕೇಂದ್ರ ಚುನಾವಣಾ ಮಂಡಳಿಗೆ ಕಳಿಸಿಕೊಡಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಪುಟ್ಟಣ್ಣಗೆ ಟಿಕೆಟ್ ನೀಡುವುದಾಗಿ ಪ್ರಕಟಿಸಿದೆ.
ಆಗ್ನೇಯ ಪದವೀಧರ ಕ್ಷೇತ್ರದ ಟಿಕೆಟ್ ಶಿರಾದ ಚಿದಾನಂದಗೌಡಗೆ ನೀಡಲು ನಿರ್ಧರಿಸಿದ್ದು, ಈ ಬಗ್ಗೆ ಮತ್ತೊಮ್ಮೆ ನಿರ್ಣಯ ಕೈಗೊಂಡು ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ಗೆ ಕಳಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ.