ಬೆಂಗಳೂರು: ಯಶವಂತಪುರ ಕ್ಷೇತ್ರದ ಉಪಸಮರ ಕಾವು ಪಡೆದಿದ್ದು, ಇಂದು ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹಾಗೂ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಜತೆ ಸರಣಿ ಸಭೆ ನಡೆಸಿ ಚುನಾವಣಾ ರಣತಂತ್ರ ರೂಪಿಸಿದರು.
ಯಶವಂತಪುರ ಕ್ಷೇತ್ರದ ಬಿಜೆಪಿ ವಲಸೆ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರು ಕೈ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ಜೊತೆ ದಿನಪೂರ್ತಿ ಸಮಾಲೋಚನೆ ನಡೆಸಿ, ಉಪಸಮರದಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು. ಎಸ್.ಟಿ.ಸೋಮಶೇಖರ್ಗೆ ಉಪಸಮರದಲ್ಲಿ ಬಿಜೆಪಿ ಸ್ಥಳೀಯ ನಾಯಕರ ಅಸಮಾಧಾನ ಹಾಗೂ ಬಿಜೆಪಿ ಕಾರ್ಯಕರ್ತರ ಸಿಟ್ಟು ದೊಡ್ಡ ಸವಾಲಿನ ವಿಷಯವಾಗಿದೆ. ಜತೆಗೆ ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಕೆಯೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿ ಕಾರ್ಯಕರ್ತರ ಮನವೊಲಿಕೆಗಾಗಿ ಸ್ಥಳೀಯ ಬಿಜೆಪಿ ನಾಯಕರಾದ ನಟ ಜಗ್ಗೇಶ್, ಶೋಭಾ ಕರಂದ್ಲಾಜೆ, ಡಿ.ವಿ.ಸದಾನಂದಗೌಡರ ಮೊರೆ ಹೋಗಿದ್ದಾರೆ. ಅವರ ಮೂಲಕ ಬಿಜೆಪಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ನಿನ್ನೆ ಕೂಡ ನಾಗದೇವನಹಳ್ಳಿಯಲ್ಲಿ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಎಸ್.ಟಿ.ಸೋಮಶೇಖರ್ ಬಿಜೆಪಿ ಬೆಂಬಲಿಗರ ಸಭೆ ನಡೆಸಿದ್ದಾರೆ. ಇಂದು ಕೆಂಗೇರಿ ಉಪನಗರದಲ್ಲಿ ಕಾರ್ಯಕರ್ತರ ಜತೆ ಸಭೆ ನಡೆಸಿ, ಉಪಸಮರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಬಳಿಕ ಸಂಜೆ ಹೇರೋಹಳ್ಳಿ ವಾರ್ಡ್ ನಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.
ನಾಳೆ ಬೆಳಗ್ಗೆ 12 ಗಂಟೆಗೆ ಹೇರೋಹಳ್ಳಿ ಪಾಲಿಕೆ ಕಚೇರಿಯಲ್ಲಿ ಎಸ್.ಟಿ.ಸೋಮಶೇಖರ್ ಅವರು ಬಿಜೆಪಿ ನಾಯಕರಾದ ಡಿ.ವಿ.ಸದಾನಂದಗೌಡ, ಶೋಭಾ ಕರಂದ್ಲಾಜೆ ಹಾಗೂ ಬೆಂಬಲಿಗರ ಜೊತೆಗೂಡಿ ನಾಮಪತ್ರ ಸಲ್ಲಿಸಲಿದ್ದಾರೆ.
ಜವರಾಯಿಗೌಡರಿಂದಲೂ ಸರಣಿ ಸಭೆ:
ಇತ್ತ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡರೂ ಉಪಸಮರಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇಂದು ದಿನಪೂರ್ತಿ ಜೆಡಿಎಸ್ ಕಾರ್ಯಕರ್ತರ ಜೊತೆ ಸಭೆ ನಡೆಸಿದರು. ಅದರಲ್ಲಿ ಕ್ಷೇತ್ರದ ಸ್ಥಳೀಯ ಮುಖಂಡರ ಜೊತೆ ಸರಣಿ ಸಭೆ ನಡೆಸಿ, ಕಾರ್ಯತಂತ್ರ ರೂಪಿಸಿದರು. ಜವರಾಯಿಗೌಡ ಕಳೆದ ಎರಡು ಬಾರಿಯೂ ಯಶವಂತಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ, ಎದುರಾಳಿಗೆ ಟಫ್ ಫೈಟ್ ಕೊಟ್ಟಿದ್ದರು. ಈ ಬಾರಿ ಅನರ್ಹ ಶಾಸಕ ಸೋಮಶೇಖರ್ ವಿರುದ್ಧದ ಅಸಮಾಧಾನದ ಅಲೆಯನ್ನು ಬಂಡವಾಳವಾಗಿಸಲು ಕಸರತ್ತು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜವರಾಯಿಗೌಡ ಇಂದು ಸ್ಥಳೀಯ ಮುಖಂಡರ ಜತೆ ಸಭೆ ನಡೆಸಿ, ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿಯನ್ನು ಮಣಿಸಲು ಬೇಕಾದ ಕಾರ್ಯತಂತ್ರ ರೂಪಿಸಿದರು. ಇತ್ತ ಕಾಂಗ್ರೆಸ್ ಕೊನೆ ಘಳಿಗೆಯಲ್ಲಿ ಪಿ.ನಾಗರಾಜ್ ಎಂಬವರನ್ನು ಯಶವಂತಪುರ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.