ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರಿಂದ ಉಪ ಚುನಾವಣೆ ಪ್ರಚಾರ ಚುರುಕುಗೊಳ್ಳುತ್ತಿದೆ. ಎಲ್ಲಾ ನಾಯಕರೂ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಇಂದು ಸಂಜೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರ ಬೆರಳೆಣಿಕೆಯಷ್ಟು ನಾಯಕರು ಪ್ರಚಾರದಲ್ಲಿ ತೊಡಗಿದ್ದು, ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇನ್ನೂ ಸರಿಯಾಗಿ ಪ್ರಚಾರ ಕಣಕ್ಕಿಳಿಯದಿರುವುದು ಆತಂಕಕ್ಕೆ ಕಾರಣವಾಗಿತ್ತು. ಅಭ್ಯರ್ಥಿಗಳಲ್ಲಿಯೂ ಒಂದಿಷ್ಟು ಗೊಂದಲ ಏರ್ಪಟ್ಟಿತ್ತು. ಆದರೆ ಇದೀಗ ಈ ನಾಯಕರೂ ಸೇರಿದಂತೆ ರಾಷ್ಟ್ರೀಯ ನಾಯಕರು ಕೂಡ ಪ್ರಚಾರ ಕಣಕ್ಕಿಳಿಲಿಯದ್ದಾರೆ ಎನ್ನುವ ಮಾತು ಕೇಳಿಬಂದಿದ್ದು, ಅಭ್ಯರ್ಥಿಗಳು ನಿಟ್ಟುಸಿರುವ ಬಿಡುವಂತಾಗಿದೆ.
ಬೆಂಗಳೂರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಆಗಮಿಸಿದ ಬಳಿಕ ಸಂಜೆ 6ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ನಾಯಕರ ಸಭೆ ನಡೆಸಲಿದೆ. ಪ್ರಚಾರ ಕಾರ್ಯಕ್ಕೆ ಇನ್ನಷ್ಟು ಚುರುಕು ಮುಟ್ಟಿಸುವ ಹಾಗೂ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸಭೆಯಲ್ಲಿ ನಿರ್ಧಾರ ಕೈಗೊಂಡು ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.
ನಾಯಕರ ಪ್ರಚಾರ:
ಕಾಂಗ್ರೆಸ್ ಹಿರಿಯ ನಾಯಕರು, ತಾರಾ ಪ್ರಚಾರಕರು ಶೀಘ್ರವೇ ಪ್ರಚಾರ ಕಣಕ್ಕಿಳಿಯಲಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ನಟ ಮುಖ್ಯಮಂತ್ರಿ ಚಂದ್ರು ನ. 25ರಿಂದ ಪ್ರಚಾರ ಆರಂಭಿಸಲಿದ್ದಾರೆ. ಅಂದು ಅವರು ಮಹಾಲಕ್ಷ್ಮಿ ಲೇಔಟ್, 26ರಂದು ಯಶವಂತಪುರ, 27ರಂದು ಕೆ.ಆರ್.ಪುರ, 30ರಂದು ಚಿಕ್ಕಬಳ್ಳಾಪುರ, ಡಿ. 2ರಂದು ಹೊಸಕೋಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ನ. 24ರಂದು ಕೆ.ಆರ್.ಪುರ ಹಾಗೂ 25ರಂದು ಶಿವಾಜಿನಗರದಲ್ಲಿ ಪ್ರಚಾರ ನಡೆಸಲಿದ್ದಾರೆ. ಮತ್ತೋರ್ವ ಕೇಂದ್ರ ಮಾಜಿ ಸಚಿವ ಹಾಗೂ ಮಾಜಿ ಸಿಎಂ ಡಾ. ಎಂ.ವೀರಪ್ಪ ಮೊಯ್ಲಿ ಇಂದು ಚಿಕ್ಕಬಳ್ಳಾಪುರ, ನ. 25 ರಂದು ಕೆ.ಆರ್.ಪುರ, 26ರಂದು ಹೊಸಕೋಟೆಯಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ.
ಕೊನೆಗೂ ಅಧಿಕೃತವಾಗಿ ಪ್ರಚಾರ ಕಣಕ್ಕೆ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಇಳಿಯುವುದು ಖಚಿತವಾಗಿದೆ. ಪಕ್ಷದ ಮಾಹಿತಿ ಪ್ರಕಾರ ಅವರು ನ. 25ರಂದು ಮಹಾಲಕ್ಷ್ಮೀ ಲೇಔಟ್ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಪ್ರಚಾರಕ್ಕೆ ಇಳಿದಿದ್ದಾರೆ. ನ. 22ರಂದು ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿರುವ ಅವರು, ಇಂದು ಯಶವಂತಪುರ, ನ. 24ರಂದು ಬಳ್ಳಾರಿಯ ವಿಜಯನಗರ, ನ. 25ರಂದು ಕೆ.ಆರ್.ಪುರದಲ್ಲಿ ಮತ್ತೆ ಪ್ರಚಾರ ನಡೆಸಲಿದ್ದಾರೆ.
ಇನ್ನು ವಲಸೆ ಕಾಂಗ್ರೆಸಿಗರ ಮೇಲೆ ಮುನಿಸಿಕೊಂಡು ಪ್ರಚಾರ ಹಾಗೂ ಪಕ್ಷದ ಚಟುವಟಿಕೆಯಿಂದ ದೂರವೇ ಇರುವ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಕೂಡ ಪ್ರಚಾರಕ್ಕಿಳಿಯಲಿದ್ದಾರೆ. ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಪ್ರಚಾರ ನಡೆಸಿ, ಭಾನುವಾರ ಹಿರೇಕೆರೂರಿಗೆ ಪ್ರಚಾರಕ್ಕೆ ತೆರಳಲಿದ್ದಾರೆ.