ಬೆಂಗಳೂರು: ಟಾಸ್ಕ್ಪೋರ್ಸ್ ಮತ್ತು ಸರ್ಕಾರದ ಒಪ್ಪಿಗೆಯಿಲ್ಲದೆ ಕುಡಿಯುವ ನೀರಿನ ಸಲುವಾಗಿ ಬೋರ್‌ವೆಲ್‌ಗಳನ್ನು ಕೊರೆಸಿದರೆ ಅದಕ್ಕೆ ದುಡ್ಡು ಕೊಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ನೀಡಿದ ಹೇಳಿಕೆ ವಿಧಾನಸಭೆಯಲ್ಲಿ ಇಂದು ಭಾರೀ ಗದ್ದಲಕ್ಕೆ ಕಾರಣವಾಯಿತು.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ, ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೊರೆಸುವ ಮುನ್ನ ಟಾಸ್ಕ್‌ಫೋರ್ಸ್ ಅನುಮತಿ ಪಡೆದಿರಬೇಕು. ಆದರೆ, ರಾಜ್ಯದಲ್ಲಿ ಟಾಸ್ಕ್‌ಫೋರ್ಸ್ ಮತ್ತು ಸರ್ಕಾರದ ಒಪ್ಪಿಗೆ ಪಡೆಯದೇ ಅಸಂಖ್ಯ ಬೋರ್‌ವೆಲ್‌ಗಳನ್ನು ನಿರ್ಮಿಸಲಾಗಿದೆ.
ಇಂತಹದರಲ್ಲಿ ಇಷ್ಟು ಬೋರ್‌ವೆಲ್ ತೆಗೆಯಲಾಗಿದೆ ಎಂದು ಕಂಟ್ರಾಕ್ಟರ್ಗಳನ್ನು ಶಾಸಕರು ಕರೆದುಕೊಂಡು ಬರುತ್ತಾರೆ. ಆದರೆ, ನಿಯಮಬಾಹಿರವಾಗಿ ಕೊರೆದ ಬೋರ್‌ವೆಲ್‌ಗಳಿಗೆ ಸರ್ಕಾರ ಹಣ ನೀಡಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ಕೃಷ್ಣ ಭೈರೇಗೌಡ,ಯು.ಟಿ.ಖಾದರ್, ನಂಜೇಗೌಡ ಸೇರಿದಂತೆ ಹಲವರು ಎದ್ದು ನಿಂತು ಸಚಿವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದರು. ರಮೇಶ್ ಕುಮಾರ್ ಮಾತನಾಡಿ, ಕುಡಿಯುವ ನೀರಿಗೆ ಬರಗಾಲ ಬಂದಾಗ ಟಾಸ್ಕಪೋರ್ಸ್ ಒಪ್ಪಿಗೆ ಪಡೆದು ಬೋರ್‌ವೆಲ್ ಕೊರೆಸುವಷ್ಟು ಸಮಯ ಇರುವುದಿಲ್ಲ. ಹೀಗಾಗಿ, ಮೊದಲು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಗುತ್ತಿಗೆದಾರರಿಗೆ ಸೂಚನೆ ನೀಡುತ್ತೇವೆ. ಆನಂತರ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಪಡೆಯಲಾಗುತ್ತದೆ ಎಂದರು.
ಹೀಗೆ ಬೋರ್‌ವೆಲ್‌ಗಳನ್ನು ಯಾರೂ ಸುಖಾಸುಮ್ಮನೆ ಕೊರೆಸುವುದಿಲ್ಲ. ಪರಿಸ್ಥಿತಿ ಕೈ ಮೀರಿದ ಸಂದರ್ಭದಲ್ಲಿ ಈ ಕೆಲಸ ಮಾಡಲೇಬೇಕಾಗುತ್ತದೆ. ಎಲ್ಲದರಷ್ಟೇ ಮುಖ್ಯವಾಗಿ ಇದು ಹಿಂದಿನಿಂದಲೂ ನಡೆದು ಬಂದ ಪದ್ಧತಿ ಎಂದ ಹೇಳಿದರು.
ಕೃಷ್ಣ ಭೈರೇಗೌಡ ಮಾತನಾಡಿ, ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಈ ಪದ್ದತಿ ನಡೆದುಕೊಂಡು ಬಂದಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಸರ್ಕಾರದ, ಟಾಸ್ಕ್‌ಫೋರ್ಸ್‌ನ ಅನುಮತಿ ಪಡೆಯುವಷ್ಟು ಸಮಯ ಇರುವುದಿಲ್ಲ. ಹೀಗಾಗಿ ಸರ್ಕಾರ ಮಂಜೂರು ಮಾಡಿದ ಬೋರ್‌ವೆಲ್‌ಗಳನ್ನು ಹೊರತುಪಡಿಸಿ ಹೆಚ್ಚುವರಿ ಬೋರ್‌ವೆಲ್ ಕೊರೆಸುವ ಕೆಲಸವನ್ನು ಶಾಸಕರು ಮಾಡಲೇಬೇಕಾಗುತ್ತದೆ ಎಂದು ವಿವರಿಸಿದರು.
ಪ್ರತಿಪಕ್ಷದ ಉಪ ನಾಯಕ ಯು. ಟಿ. ಖಾದರ್ ಮಾತನಾಡಿ, ಕೋಲಾರದಂತಹ ಬರಪೀಡಿತ ಜಿಲ್ಲೆಯಲ್ಲಿ ಸಮಸ್ಯೆ ಹೆಚ್ಚು. ಹೀಗಾಗಿ ಸನ್ನಿವೇಶವನ್ನು ಗಮನಿಸಿ ಸರ್ಕಾರ ಧಾರಾಳವಾಗಿ ವರ್ತಿಸಬೇಕು. ಏಕಾಏಕಿಯಾಗಿ ದುಡ್ಡು ಕೊಡುವುದಿಲ್ಲ ಎಂಬುದು ಸರಿಯಲ್ಲ ಎಂದರು.
ಈ ಹಂತದಲ್ಲಿ ಪುನಃ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಬಜೆಟ್ ನಲ್ಲಿ ಮಂಜೂರಾದ ಹಣಕ್ಕಿಂತ ಹೆಚ್ಚು ಹಣವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಬೋರ್‌ವೆಲ್ ತೆಗೆದಿದ್ದೇವೆ ಎಂದು ಗುತ್ತಿಗೆದಾರರು ಬಂದು ನಿಂತರೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಇಷ್ಟಾದರೂ ಸಮಸ್ಯೆ ಇರುವ ಕ್ಷೇತ್ರಗಳ ಶಾಸಕರು ನನ್ನ ಬಳಿ ಬರಲಿ. ಅವರನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ಯುತ್ತೇನೆ. ಅವರು ಲಭ್ಯವಿರುವ ಹಣಕಾಸಿನ ಇತಿಮಿತಿಯಲ್ಲಿ ನೆರವು ನೀಡಬಹುದು ಎಂದರು.
ಗ್ರಾಮ ಪಂಚಾಯ್ತಿಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ : ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಬೇಡಿಕೆ ಆಧಾರದ ಮೇಲೆ ತ್ವರಿತವಾಗಿ ಭರ್ತಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ. ಎಸ್. ಈಶ್ವರಪ್ಪ ಅವರು, ಪ್ರಶ್ನೋತ್ತರ ವೇಳೆಯಲ್ಲಿಂದು ಸದಸ್ಯ ಸುಕುಮಾರ್ ಶೆಟ್ಟಿ ಅವರ ಪ್ರಸ್ತಾಪಕ್ಕೆ ಉತ್ತರಿಸಿದರು. ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ ಹುದ್ದೆ ಖಾಲಿ ಇದ್ದರೆ ತಕ್ಷಣ ಅವರು ಜಿಲ್ಲಾ ಪಂಚಾಯ್ತಿಗೆ ತಿಳಿಸಲಿ ಎಂದು ಸೂಚಿಸಿದರು.
ತಮ್ಮ ಗ್ರಾಮ ಪಂಚಾಯ್ತಿಯಲ್ಲಿ ಇಂತಹ ಹುದ್ದೆಗಳು ಖಾಲಿ ಇವೆ ಎಂದವರು ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವನೆ ಸಲ್ಲಿಸಿದರೆ ಅವನ್ನು ಭರ್ತಿ ಮಾಡಲಾಗುವುದು ಎಂದರು. ಗ್ರಾಮ ಪಂಚಾಯ್ತಿಗಳಿಗೆ ಸಿಬ್ಬಂದಿಯ ಕೊರತೆ ಆಗಬಾರದು ಎಂಬುದನ್ನು ನಾನು ಒಪ್ಪುತ್ತೇನೆ. ಹೀಗಾಗಿಯೇ, ಆ ಹುದ್ದೆಗಳ ಭರ್ತಿ ಮಾಡಲು ತ್ವರಿತ ಒಪ್ಪಿಗೆ ಸಿಗಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಸುಕುಮಾರ್ ಶೆಟ್ಟಿ ಅವರು, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಿಂದ ಹಿಡಿದು ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಲು ಗ್ರಾಮಪಂಚಾಯ್ತಿಗಳು ಕೆಲಸ ಮಾಡಬೇಕಾಗುತ್ತದೆ ಎಂದು ನುಡಿದರು. ಆದರೆ, ಇಷ್ಟೆಲ್ಲ ಕೆಲಸ ಮಾಡಬೇಕಿದ್ದರೂ ಗ್ರಾಮ ಪಂಚಾಯ್ತಿಗಳಲ್ಲಿ ಸಿಬ್ಬಂದಿಯ ಕೊರತೆ ಇದೆ. ಹೀಗಾದರೆ, ಅವು ಜನರ ಕೆಲಸ ಹೇಗೆ ಮಾಡಬೇಕು?ಎಂದು ಪ್ರಶ್ನಿಸಿದರು.
ಸುಕುಮಾರ್ ಶೆಟ್ಟಿ ಅವರ ಮಾತನ್ನು ಒಪ್ಪಿಕೊಂಡ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಜ್ಯದ ಗ್ರಾಮಪಂಚಾಯ್ತಿಗಳಲ್ಲಿ ಹುದ್ದೆ ಖಾಲಿ ಇದ್ದರೆ ತಕ್ಷಣ ಜಿಲ್ಲಾ ಪಂಚಾಯ್ತಿಗಳಿಗೆ ತಿಳಿಸಲಿ. ಆ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಓದಿ: ರಾಷ್ಟ್ರ ಧ್ವಜ ಹಿಡಿದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಸದನದ ಬಾವಿಗಿಳಿದು ಕೈ ಶಾಸಕರ ಪ್ರತಿಭಟನೆ