ಬೆಂಗಳೂರು: ವಿಶೇಷಚೇತನರು ಬಸ್ನಲ್ಲಿ ಸಂಚರಿಸುವ ಸಂಕಷ್ಟ ನಿವಾರಣೆಗೆ ಮುಂದಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ವಿಶೇಷಚೇತನರ ಪ್ರಯಾಣಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾದ ಬಸ್ಗಳನ್ನು ಶೀಘ್ರ ರಸ್ತೆಗೆ ಇಳಿಸಲಿದೆ.
ವಿಶೇಷಚೇತನರು ಸಂಚಾರಕ್ಕೆ ಬಳಸುವ ತಮ್ಮ ವೀಲ್ ಚೇರ್ ಸಮೇತ ಬಸ್ನೊಳಗೆ ಹತ್ತುವ ಹಾಗೂ ಇಳಿಯುವ ಸೌಲಭ್ಯವನ್ನೊಳಗೊಂಡ ವಿಶಿಷ್ಟವಾಗಿ ತಯಾರಿಸಲಾದ ಬಸ್ಗಳು ಶೀಘ್ರದಲ್ಲೇ ಬೆಂಗಳೂರಿನ ರಸ್ತೆಗಳಲ್ಲಿ ಕಾಣಿಸಲಿವೆ. ಎಲೆಕ್ಟ್ರಿಕ್ ವಾಹನಗಳ ತ್ವರಿತ ತಯಾರಿಕೆ ಹಾಗೂ ಬಳಕೆ ಯೋಜನೆ-2 ಅಡಿಯಲ್ಲಿ (Faster Adoption and Manufacturing of Electric Vehicles in India - FAME 2) ನಾನ್ ಎಸಿ ಎಲೆಕ್ಟ್ರಿಕ್ ಮಾದರಿಯ 300 ಬಸ್ಗಳನ್ನು ಬಿಎಂಟಿಸಿ ಕಾರ್ಯಾರಣೆಗಿಳಿಸಲಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ನಿರ್ದೇಶಕ (ಐಟಿ) ಸೂರ್ಯ ಸೇನ್ ಎ.ವಿ., "ಮುಂಬರುವ ಆಗಸ್ಟ್ 1ರ ವೇಳೆಗೆ ಇಂತಹ ವಿಶೇಷ ವಿನ್ಯಾಸದ 100 ಬಸ್ಗಳು ನಮಗೆ ಪೂರೈಕೆಯಾಗುವ ನಿರೀಕ್ಷೆಯಿದೆ. ವೀಲ್ ಚೇರ್ ಹತ್ತಿಸಿಕೊಳ್ಳುವ ಈ ಬಸ್ಗಳ ಕಾರ್ಯಾಚರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು. ಮೆಜೆಸ್ಟಿಕ್, ರಿಂಗ್ ರಸ್ತೆ, ಸಿಲ್ಕ್ ಬೋರ್ಡ್ ಸೇರಿದಂತೆ ಹಲವಾರು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಮಾರ್ಗಗಲ್ಲಿ ಈ ಬಸ್ಗಳು ಸಂಚರಿಸಲಿವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣ: ಖರೀದಿಗೆ ಜನರ ಹಿಂದೇಟು