ಬೆಂಗಳೂರು: ಭಾರತ್ ಜೋಡೋ ಬಳಿಕ ಇದೀಗ ರಾಜ್ಯ ಕೈ ನಾಯಕರು ಬಸ್ ಯಾತ್ರೆಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ರಾಹುಲ್ ಗಾಂಧಿ ನಡೆಸಿದ ಪಾದಯಾತ್ರೆಯ ಯಶಸ್ಸಿನ ಬಳಿಕ ಪಕ್ಷದ ನಾಯಕರು ಬಸ್ ಯಾತ್ರೆ ಮೂಲಕ ರಾಜ್ಯ ಪರ್ಯಟನೆ ಮಾಡಲು ಸಜ್ಜಾಗುತ್ತಿದ್ದಾರೆ. ಐಕ್ಯತಾ ಯಾತ್ರೆಯಿಂದ ಸೃಷ್ಟಿಯಾಗಿರುವ ವಾತಾವರಣವನ್ನು ಮುಂದುವರಿಸಿಕೊಂಡು ಹೋಗಲು ಬಸ್ ಯಾತ್ರೆ ನಡೆಸಲು ಸಿದ್ಧತೆ ನಡೆಯುತ್ತಿದೆ.
ಈ ನಿಟ್ಟಿನಲ್ಲಿ ಎರಡು ತಂಡಗಳಾಗಿ ರಾಜ್ಯಾದ್ಯಂತ ಪ್ರವಾಸಕ್ಕೆ ಯೋಜನೆ ರೂಪುಗೊಳ್ಳುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ಯಾತ್ರೆ ನಡೆಸಲಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ 224 ಕ್ಷೇತ್ರಗಳಲ್ಲೂ ಬಸ್ ಯಾತ್ರೆ ನಡೆಸಲು ಸಿದ್ದರಾಮಯ್ಯ ಹಾಗೂ ಡಿಕೆಶಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನವೆಂಬರ್‌ನಲ್ಲಿ ಉಭಯ ನಾಯಕರ ತಂಡಗಳಿಂದ ಪ್ರವಾಸ ನಡೆಸಲು ಉದ್ದೇಶಿಸಲಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಬಸ್ ಯಾತ್ರೆ ಆರಂಭಿಸಲು ಸಿದ್ದರಾಮಯ್ಯ ತಯಾರಿ ನಡೆಸುತ್ತಿದ್ದರೆ, ದಕ್ಷಿಣ ಕರ್ನಾಟಕ ಭಾಗದಿಂದ ಡಿಕೆಶಿ ಬಸ್ ಯಾತ್ರೆ ಆರಂಭಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ರಾಜ್ಯದ 224 ಕ್ಷೇತ್ರಗಳಲ್ಲೂ ಉಭಯ ನಾಯಕರ ನೇತೃತ್ವದಲ್ಲಿ ಬಸ್ ಯಾತ್ರೆ ಸಂಚರಿಸಲಿದೆ. ಬಸ್ ಯಾತ್ರೆಯಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರ, ವೈಫಲ್ಯ, ಕಮಿಷನ್ ವ್ಯವಹಾರ, ಅಭಿವೃದ್ಧಿ ಕುಂಠಿತದ ಬಗ್ಗೆ ಪ್ರಚಾರ ನಡೆಸಲಿದ್ದಾರೆ.
ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ: ಡಿಸಿ, ಜಿ.ಪಂ ಸಿಇಓಗಳ ಜತೆ ಸಭೆ