ಬೆಂಗಳೂರು: ಬಿಬಿಎಂಪಿಯಲ್ಲಿ ಇಂದು ಹಲವಾರು ವಿಷಯಗಳ ಕುರಿತು ಸಭೆ ನಡೆಯಿತು. ಪಾಲಿಕೆ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದು, ಆದಾಯ ಸಂಗ್ರಹದ ಬಗ್ಗೆ ಗಮನಕೊಡುತ್ತಿಲ್ಲ. 1650 ಬಸ್ ಶೆಲ್ಟರ್ ಪ್ಯಾಕೇಜ್ ಕೇವಲ ಇಬ್ಬರಿಗೆ ಗುತ್ತಿಗೆ ಆಗಿದೆ. ಆದರೆ ಒಂದು ವರ್ಷಕ್ಕೆ 642 ಮಾತ್ರ ಬಸ್ ಶೆಲ್ಟರ್ ನಿರ್ಮಾಣ ಮಾಡಿದ್ದಾರೆ, ಉಳಿದ ಟೆಂಡರ್ ರದ್ದು ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ವಾಜಿದ್ ಆಗ್ರಹಿಸಿದರು.
ನಗರದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಬಸ್ ಶೆಲ್ಟರ್ ಇದ್ದು, ಹೆಚ್ಚಿನವು ಕಾನೂನುಬಾಹಿರವಾಗಿದೆ. ಯಾರೂ ಜಾಹೀರಾತು ತೆರಿಗೆ ಕಟ್ಟುತ್ತಿಲ್ಲ. ಗುತ್ತಿಗೆ ನೀಡಿದ ಸಂಸ್ಥೆಗಳಿಂದ 26 ಕೋಟಿ ರೂ. ಜಾಹೀರಾತು ತೆರಿಗೆ ಬರಬೇಕಿತ್ತು. ಆದರೆ ಕೇವಲ 6 ಕೋಟಿ ಜಾಹೀರಾತು ತೆರಿಗೆ ಬಂದಿದೆ. ಒಂದು ವರ್ಷದ ಬಳಿಕ ಈ ಸಂಸ್ಥೆಗಳು ಪಾಲಿಕೆಗೆ ಬಿಟ್ಟುಕೊಡಬೇಕಿತ್ತು. ಪಾಲಿಕೆ ಯಾರಿಗೆ ಬೇಕಾದ್ರು ಜಾಹೀರಾತಿಗೆ ನೀಡಬಹುದು. ಆದ್ರೆ ಇದ್ಯಾವುದೂ ನಡೆದಿಲ್ಲ. ಪಾಲಿಕೆ ಆದಾಯಕ್ಕೆ ಖೋತಾ ಆಗಿದೆ. ಕಾನೂನು ಬಾಹಿರ ಬಸ್ ಶೆಲ್ಟರ್ಗಳನ್ನು ತೆರವು ಮಾಡಬೇಕು, 1650 ರ ಪೈಕಿ ಸಾವಿರ ಬಸ್ ಶೆಲ್ಟರ್ ನಿರ್ಮಾಣದ ಗುತ್ತಿಗೆ ಕೈಬಿಡಬೇಕು. ಟೈಮ್ಸ್ ಹಾಗೂ ಸೈನೇಜ್ ಸಂಸ್ಥೆಗಳನ್ನು ಬ್ಲಾಕ್ ಲಿಸ್ಟ್ಗೆ ಹಾಕಬೇಕು ಎಂದು ವಾಜಿದ್ ಒತ್ತಾಯಿಸಿದರು. ಈ ವೇಳೆ ಬಿಜೆಪಿ ಪಾಲಿಕೆ ಸದಸ್ಯರು, ಹಾಗೂ ಮೇಯರ್ ಈ ಅವ್ಯವಹಾರಗಳು ನಡೆದಿದ್ದು, ಕಾಂಗ್ರೆಸ್ ಅವಧಿಯಲ್ಲೇ ಎಂದು ಟೀಕಿಸಿದರು.
ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಬಿ ಖಾತಾಗಳನ್ನು, ಎ ಖಾತಾ ಮಾಡುವ ಬಗ್ಗೆ ಜೋರಾಗಿ ಸದ್ದಾಗಿತ್ತು. ಆದ್ರೆ ನಂತರ ಏನಾಯ್ತು. ಪಾಲಿಕೆಗೆ ಕೋಟ್ಯಾಂತರ ರುಪಾಯಿ ನಷ್ಟವಾಗುತ್ತಿದ್ದು, ಈ ಎ ಖಾತಾ, ಬಿ ಖಾತಾದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದ್ರು. ಇದಕ್ಕೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಕೂಡ ಸಾಥ್ ನೀಡಿ, ಐದು ವರ್ಷದಿಂದಲೂ ಈ ಕೆಲಸ ಮಾಡಿಲ್ಲ ಎಂದರು. ಮಹಾರಾಜ ಕಾಂಪ್ಲೆಕ್ಸ್ 2005 ರಲ್ಲಿ ನಿರ್ಮಾಣವಾಗಿದ್ದು, ವರ್ಷಕ್ಕೆ ಕೇವಲ 70 ಲಕ್ಷ ಪಾಲಿಕೆಗೆ ಕೊಡುತ್ತಿದ್ದಾರೆ. ಆದ್ರೆ ಆ ಸಂಸ್ಥೆಯ ಮಾಲೀಕ, ಮೂವತ್ತು ವರ್ಷಕ್ಕೆ ಲೀಸ್ ಪಡೆದು ಕೋಟ್ಯಾಂತರ ರೂಪಾಯಿ ಕಬಳಿಸುತ್ತಿದ್ದಾರೆ ಎಂದರು.
ಕನ್ನಡ ಸಂಘ ಸಂಸ್ಥೆಗಳ ಕಟ್ಟಡ, ಜಾಗ ಮಾರಾಟ ಮಾಡುವುದು ಸರಿಯಲ್ಲ:
ಉದಯಬಾನು ಕಲಾಸಂಘ ಸೇರಿದಂತೆ, ಕನ್ನಡ ಸಂಘ ಸಂಸ್ಥೆಗಳು, ಶಾಲೆಗಳ ಜಾಗಗಳನ್ನು ಗುತ್ತಿಗೆ ನವೀಕರಿಸದೆ. ಮಾರುಕಟ್ಟೆ ದರ ಕೊಟ್ಟು ಖರೀದಿಸಿ ಎಂದು ಸರ್ಕಾರ ಆದೇಶ ಹೊರಡಿಸಿರುವುದು ಖಂಡನಾರ್ಹ ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಆಗ್ರಹಿಸಿದರು. ಕೋವಿಡ್ ನೆಪದಲ್ಲಿ , ಆದಾಯ ಸಂಗ್ರಹಕ್ಕೆ ನಿವೇಶನಗಳನ್ನು ಮಾರಾಟ ಮಾಡುವುದು ಬೇಡ. ಕನ್ನಡ ಸಂಘಗಳಿಗೆ ಕೊಂಡುಕೊಳ್ಳುವ ಶಕ್ತಿ ಇಲ್ಲ. ಕೋವಿಡ್ ನೆಪದಲ್ಲಿ ಪಾಲಿಕೆ ಆಸ್ತಿಗಳನ್ನು ಮಾರಾಟ ಮಾಡುವುದು ಬೇಡ ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ್ ತಿಳಿಸಿದರು. ಬಿಡಿಎ ಗುತ್ತಿಗೆ ಕೊಟ್ಟಿರುವ ದೊಡ್ಡ ದೊಡ್ಡ ಪೆಟ್ರೋಲ್ ಬಂಕ್, ಕಟ್ಟಡಗಳಿರುವ ಜಾಗದ ಮಾರಾಟಕ್ಕೆ ಹೊರಟಿರುವುದು ಹೊರತು ಬಿಬಿಎಂಪಿಯ ನಿವೇಶನಗಳನ್ನು ಅಲ್ಲ ಎಂದು ಪದ್ಮನಾಭ ರೆಡ್ಡಿ ತಿಳಿಸಿದರು. ಆದರೆ ಪಾಲಿಕೆಯ ಜಾಗವನ್ನು ಬೌರಿಂಗ್ ಕ್ಲಬ್ ಸೇರಿದಂತೆ, ವಿವಿಧ ಸಂಸ್ಥೆಗಳಿಗೆ ಅತ್ಯಂತ ಕಡಿಮೆ ಬಾಡಿಗೆಗೆ, ಗುತ್ತಿಗೆಗೆ ನೀಡಲಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ಆಯುಕ್ತರು, ಕೋವಿಡ್ ಸಮಯದಲ್ಲಿ ಆರ್ಥಿಕ ಚಟುವಟಿಕೆ ಕಡಿಮೆ ಆದಾಗ, ಸಂಪನ್ಮೂಲ ಕ್ರೂಡೀಕರಣಕ್ಕೆ ಹಲವು ಸಭೆ ನಡೆಸಲಾಗಿದೆ. ರಾಜ್ಯ ಸರ್ಕಾರದ ವತಿಯಿಂದ 115 ಸಂಘ ಸಂಸ್ಥೆಗಳಿಗೆ 921 ಎಕರೆ ಜಮೀನನ್ನು ಗುತ್ತಿಗೆಗೆ ನೀಡಲಾಗಿದೆ. ಇದರಿಂದ 20-30 ವರ್ಷಕ್ಕೆ ಅತ್ಯಂತ ಕಡಿಮೆ ಆದಾಯ ಬರುತ್ತಿದೆ. ಒಂದು ಎಕರೆ ಜಾಗವನ್ನು ಕೇವಲ ಸಾವಿರ ರುಪಾಯಿ ಲೀಸ್ ನೀಡಲಾಗಿದೆ. ಹೀಗಾಗಿ ಈ ಸಮಯದಲ್ಲಿ ಯಾರಾದ್ರು ಕೊಂಡುಕೊಳ್ಳಲು ಮುಂದೆ ಬಂದರೆ, ಮಾರಾಟ ಮಾಡಲು ಸರ್ಕಾರ ಸೂಚಿಸಿತ್ತು. ಈ ಪ್ರಕಾರ ಕಂದಾಯ ಇಲಾಖೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಆದ್ರೆ ಪಾಲಿಕೆ ವ್ಯಾಪ್ತಿಯಲ್ಲಿರುವ ಸಂಘ ಸಂಸ್ಥೆ, ಶಾಲೆಗಳನ್ನು ಈ ನಿರ್ಧಾರದಿಂದ ಹೊರಗಿಡಲು ಪಾಲಿಕೆಯಿಂದ ನಿರ್ಣಯ ಮಾಡಲಾಗುವುದು ಎಂದು ಆಯುಕ್ತರು ಉತ್ತರಿಸಿದರು. ಎರಡುವರೇ ಎಕರೆಗೆ ಕೇವಲ ಎರಡುವರೇ ರೂಪಾಯಿಗೆ ಕ್ಲಾರೆನ್ಸ್ ಶಾಲೆಗೆ ಗ್ರೌಂಡ್ ಲೀಸ್ ನೀಡಲಾಗಿದೆ. ಆದರೆ ಸಾರ್ವಜನಿಕರಿಗೆ ಇದನ್ನು ಬಳಕೆಗೆ ಬಿಡುತ್ತಿಲ್ಲ, ಲೀಸ್ ಅವಧಿ ಮುಗಿದಿದ್ದು, ವಾಪಸ್ ಪಡೆಯಬೇಕು ಎಂದು ಕಾಕ್ಸ್ ಟೌನ್ ಪಾಲಿಕೆ ಸದಸ್ಯರು ಆಗ್ರಹಿಸಿದರು.
ಜಲಮಂಡಳಿ ಬೋರ್ ವೆಲ್ಗಳನ್ನು ಕೊರೆಸಬಾರದು, ರಿಪೇರಿ ಮಾಡ್ಬಾರ್ದು ಎಂಬ ನಿರ್ಣಯ ತೆಗೆದುಕೊಂಡಿದೆ. ಆದರೆ 110 ಹಳ್ಳಿಗಳಲ್ಲಿ ನೀರಿಗೆ ಬೋರ್ ವೆಲ್ಗಳನ್ನೇ ನಂಬಿಕೊಂಡಿದ್ದು, ರಿಪೇರಿ ಮಾಡದಿದ್ದರೆ ಕಷ್ಟವಾಗಲಿದೆ ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಆಗ್ರಹಿಸಿದರು.
ಗುತ್ತಿಗೆದಾರರು ಕಪ್ಪುಪಟ್ಟಿಗೆ:
ರಸ್ತೆ ಕಾಮಗಾರಿ, ಒಳಚರಂಡಿ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆ ನೀಡಿರುವ ಬಗ್ಗೆ ಬಿಡ್ ಕೆಪಾಸಿಟಿ ಕುರಿತು ನಗರಾಭಿವೃದ್ಧಿ ಇಲಾಖೆಗೆ ದೂರು ಹೋಗಿ ತನಿಖೆ ಆಗ್ತಿದೆ. ಇದರ ಬದಲು ಬಿಬಿಎಂಪಿಯಲ್ಲೇ ತನಿಖೆ ಆಗಬೇಕು ಎಂದು ಮೇಯರ್ ಗೌತಮ್ ಕುಮಾರ್ ಆಯುಕ್ತರಿಗೆ ಆದೇಶಿಸಿದರು. ವರ್ಕ್ ಆರ್ಡರ್ ನೀಡುವ ಮೊದಲು ವರ್ಕ್ ಡನ್ ಸರ್ಟಿಫಿಕೇಟ್ ನೋಡಬೇಕು. ಎಲ್ಲಾ ಗುತ್ತಿಗೆದಾರರು ಬಿಡ್ ಕೆಪಾಸಿಟಿ, ತಪ್ಪು ಮಾಹಿತಿ ನೀಡಿ ವರ್ಕ್ ಡನ್ ಸರ್ಟಿಫಿಕೇಟ್ ಪಡೆಯುತ್ತಿದ್ದಾರೆ. ಒಂದು ಕೋಟಿ ರೂ. ಯೋಜನೆಯ ಗುತ್ತಿಗೆದಾರರನ್ನು 20 ಕೋಟಿಗೆ ಗುತ್ತಿಗೆ ನೀಡಲಾಗುತ್ತಿದೆ. ಇದನ್ನು ಸಂಪೂರ್ಣ ತನಿಖೆ ಮಾಡಿ, ಅನರ್ಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಮೇಯರ್ ಆದೇಶ ಮಾಡಿದರು. ಹಲವು ಕಡೆ ಗುತ್ತಿಗೆದಾರರು, ಕೆಲಸ ಅರ್ಧಕ್ಕೇ ನಿಲ್ಲಿಸಿದ್ದಾರೆ. ಮುಖ್ಯರಸ್ತೆಗಳಲ್ಲೇ ರಸ್ತೆಗುಂಡಿಗಳು ಬಿದ್ದಿವೆ ಎಂದರು.
ಚುನಾವಣೆ ಘೋಷಣೆಯಾಗುವವರೆಗೂ ಸಭೆಗೆ ಅವಕಾಶ:
ಚುನಾವಣೆ ಘೋಷಣೆ ಮಾಡದ ಹಿನ್ನೆಲೆ ಸಭೆ ನಡೆಸಿ ಚರ್ಚೆ ಮಾಡಬಹುದು ಎಂದು ಬಿಜೆಪಿ ಪಾಲಿಕೆ ಸದಸ್ಯ ಪದ್ಮನಾಭ ರೆಡ್ಡಿ ಸಲಹೆ ನೀಡಿದರು. ಇದಕ್ಕೆ ಆಯುಕ್ತರು ಉತ್ತರಿಸಿ, ಕೆಎಂಸಿ ಕಾಯ್ದೆಯಲ್ಲಿ ನಿರ್ಧಿಷ್ಟ ಕಾಯ್ದೆ ಇಲ್ಲದ ಕಾರಣ, ಮೇಯರ್ ನಿರ್ಧಾರದಂತೆ ಸಭೆ ನಡೆಸಬಹುದು ಎಂದರು. ಪದ್ಮನಾಭ ರೆಡ್ಡಿ ಮಾತನಾಡಿ, 1.7.2020 ರಂದು ರಾಜ್ಯ ಚುನಾವಣಾ ಆಯೋಗ ಪಾಲಿಕೆಗೆ ಪತ್ರ ಬರೆದು, ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ, ಸರ್ಕಾರ ಪಾಲಿಕೆಯ ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಣೆ ಮಾಡಿದೆ. ಈ ಚುನಾವಣೆಗೆ 2015 ರ ವಿಧಾನಸಭಾ ಚುನಾವಣೆಯಂತೆ, ಮತದಾರರ ಪಟ್ಟಿಯನ್ನು ತಯಾರಿಸಲು ಚುನಾವಣಾಧಿಕಾರಿಗಳನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿತ್ತು. ಆದರೆ ಬಿಬಿಎಂಪಿ ಇಲ್ಲಿಯವರೆಗೂ ಜಿಲ್ಲಾ ಚುನಾವಣಾಧಿಕಾರಿಗಳ ನೇಮಕಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಪದ್ಮನಾಭ ರೆಡ್ಡಿ ತಿಳಿಸಿದರು. ಆಯುಕ್ತರು ಉತ್ತರಿಸಿ, ಒಂದು ವಾರದೊಳಗೆ ಚುನಾವಣಾ ಆಯೋಗ ಕೇಳಿದ ಮಾಹಿತಿ ನೀಡಲಾಗುವುದು ಎಂದರು.
ಬೆಂಗಳೂರಿನಲ್ಲಿ ಕೋವಿಡ್ ಟೆಸ್ಟ್ಗೆ ನಾಲ್ಕು ವರ್ಷ ಬೇಕಾಗಬಹುದು:
ಸಭೆಯಲ್ಲಿ ಮಾತನಾಡಿದ, ಪ್ರತಿಪಕ್ಷದ ನಾಯಕ ವಾಜಿದ್, 28 ರಿಂದ 53 ಶೇಕಡಾಕ್ಕೆ ರಿಕವರಿ ಪ್ರಮಾಣ ಹೆಚ್ಚಾಗಿದೆ. 10 ಸಾವಿರ ಸೋಂಕು ಪರೀಕ್ಷೆ ಮಾಡಿದಾಗ 2 ಸಾವಿರ ಪಾಸಿಟಿವ್ ಬರುತ್ತಿದೆ. ಆದ್ರೆ ಉಳಿದ ಎಂಟು ಸಾವಿರ ಜನಕ್ಕೆ ಯಾವುದೇ ಮಾಹಿತಿ ಹೋಗುತ್ತಿಲ್ಲ. ಇದು ಸರಿಹೋಗಬೇಕಿದೆ ಎಂದರು. ಬೆಂಗಳೂರಿನ ಜನಸಂಖ್ಯೆ ಒಂದು ಕಾಲು ಕೋಟಿ ಜನರನ್ನು ನಾಲ್ಕು ವರ್ಷ ಟೆಸ್ಟ್ ಮಾಡಿದ್ರೂ, ಅಷ್ಟು ಸಮಯ ಕೊರೊನಾ ಜೊತೆ ಜೀವನ ಮಾಡಬೇಕಾಗಿದೆ ಎಂದು ಟೀಕಿಸಿದರು.