ಚೆನ್ನೈ/ಬೆಂಗಳೂರು: ಕೆಎಸ್ಆರ್ಟಿಸಿ ಬಸ್ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ 13 ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಸಿಪ್ಕಾಟ್ ಕೈಗಾರಿಕಾ ಪ್ರದೇಶದ ಬಳಿ ಜರುಗಿದೆ.
ಕಲ್ಲಕುರಿಚಿ ಜಿಲ್ಲೆಯ ತಿರುಕೋವಿಲೂರ್‌ನಿಂದ ಹೊರಟ ಕೆಎಸ್ಆರ್ಟಿಸಿ ಬಸ್ನಲ್ಲಿ ಚಾಲಕ ಲಕ್ಕಪ್ಪ, ಕಂಡಕ್ಟರ್ ಮೊಹಮ್ಮದ್ ಫಾರೂಕ್ ಸೇರಿದಂತೆ 52 ಪ್ರಯಾಣಿಕರು ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಸಿಪ್ಕಾಟ್ ಕೈಗಾರಿಕಾ ಪ್ರದೇಶಕ್ಕೆ ತಲುಪುವ ಸಂದರ್ಭದಲ್ಲಿ ಕಂಟೈನರ್ ಲಾರಿ, ಕೆಎಸ್ಆರ್ಟಿಸಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಚಾಲಕ ಸೇರಿದಂತೆ 13ಮಂದಿಗೆ ಗಾಯಗಳಾಗಿದ್ದು, ಯಾವುದೇ ಪ್ರಾಣ ಹಾನಿ ನಡೆದಿಲ್ಲ. ಗಾಯಗೊಂಡ ಎಲ್ಲರನ್ನೂ ಹೊಸೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು. ಜೆಸಿಬಿ ಮೂಲಕ ಜಖಂಗೊಂಡ ಬಸ್ ಅನ್ನು ವಿಲೇವಾರಿ ಮಾಡಿದ ನಂತರ ಸಂಚಾರ ಆರಂಭಗೊಂಡಿತು. ಹೊಸೂರು ಸಿಪ್ಕಾಟ್ ಪೊಲೀಸರು ಅಪಘಾತದ ಕುರಿತು ತನಿಖೆ ನಡೆಸುತ್ತಿದ್ದಾರೆ.