ಬೆಂಗಳೂರು: ಸ್ನೇಹಿತರ ಮನೆಗೆ ಹೋಗಿ ವಾಪಸ್ ಆಗುತ್ತಿದ್ದ ಅಫ್ಘಾನಿಸ್ತಾನ ವಿದ್ಯಾರ್ಥಿಗಳ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಅಮಾಯಕ ಅಫ್ಘಾನ್ ಪ್ರಜೆಗಳ ಮೇಲೆ ಅಟ್ಟಹಾಸ ಮೆರೆದಿದ್ದ ವೈಭವ್, ರಾಕೇಶ್, ಚಂದ್ರಶೇಖರ್ ಹಾಗೂ ದರ್ಶನ್ ಎಂಬುವರನ್ನು ಬಂಧಿಸಲಾಗಿದೆ. ಬೆಂಗಳೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಘ್ಪಾನ್ ವಿದ್ಯಾರ್ಥಿಗಳು ಮಾರ್ಚ್ 11 ರಂದು ತಡರಾತ್ರಿ ಸ್ನೇಹಿತರ ಮನೆಗೆ ಹೋಗಿ ಜ್ಞಾನಜ್ಯೋತಿ ನಗರದ ತಮ್ಮ ನಿವಾಸಕ್ಕೆ ವಾಪಸ್ ಆಗುವಾಗ ಎರಡು ಬೈಕ್ನಲ್ಲಿ ನಾಲ್ಕು ಮಂದಿ ಬಂದು ಅಡ್ಡಗಟ್ಟಿದ್ದಾರೆ. ನಂತರ ಮೊಬೈಲ್ ನೀಡುವಂತೆ ತಾಕೀತು ಮಾಡಿದ್ದಾರೆ. ಮೊಬೈಲ್ ನಿರಾಕರಿಸಿದ್ದಕ್ಕೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಮಾರ್ಚ್ 11ರಂದು ಆರೋಪಿ ವೈಭವ್ ಹುಟ್ಟುಹಬ್ಬವನ್ನ ಸ್ನೇಹಿತರೊಂದಿಗೆ ಸಂಭ್ರಮಾಚರಣೆ ಮಾಡಿಕೊಂಡಿದ್ದ. ನಂತರ ಎರಡು ಬೈಕ್ ಮೇಲೆ ಬಂದಿದ್ದ ನಾಲ್ವರು ಮಧ್ಯರಾತ್ರಿ 2 ಗಂಟೆ ಹೊತ್ತಲ್ಲಿ ಸಿಟಿ ರೌಂಡ್ಸ್ ಹಾಕಿದ್ದಾರೆ. ಈ ವೇಳೆ ಅಫ್ಘಾನ್ ಪ್ರಜೆಗಳಾದ ಇಬ್ಬರು ಸ್ನೇಹಿತರು ಖಾಸಗಿ ಹೋಟೆಲ್ನಲ್ಲಿ ಪಾರ್ಟಿ ಮುಗಿಸಿ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉಳ್ಳಾಲ ಮುಖ್ಯರಸ್ತೆ ಕಡೆಗೆ ಮನೆಗೆ ಹೋಗೋಕೆ ಅಂತಾ ಬರ್ತಿದ್ರು.
ಈ ವೇಳೆ ಅವರು ನಾಲ್ವರ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮೊಬೈಲ್ ಹಾಗೂ ಹಣ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಪ್ರತಿರೋಧಿಸಿದಾಗ ಚಾಕುವಿನಿಂದ ಹಲ್ಲೆ ಮಾಡಿ ಬೆರಳು ಕಟ್ ಮಾಡಿದ್ದಲ್ಲದೇ ಮೊಬೈಲ್ ಹಾಗೂ ಹಣ ಕಿತ್ತು ಎಸ್ಕೇಪ್ ಆಗಿದ್ದರು.
ಘಟನೆ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಾಗ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜ್ಞಾನಭಾರತಿ ಠಾಣೆ ಇನ್ಸ್ ಪೆಕ್ಟರ್ ಲಕ್ಷ್ಮಣ್ ನಾಯಕ್ ನೇತೃತ್ವದ ತಂಡ ಶತಾಯಗತಾಯ ಆರೋಪಿಗಳ ಹೆಡೆಮುರಿ ಕಟ್ಟಲು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಸುಮಾರು 15 ಕಿ.ಮೀ ದೂರದಷ್ಟು 150 ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಅಲ್ಲದೇ, ಆರೋಪಿಗಳು ದಾಸರಹಳ್ಳಿ ಅಗ್ರಹಾರ ಮತ್ತು ಬಸವೇಶ್ವರನಗರ ಮೂಲದವರು ಅನ್ನೋದು ಗೊತ್ತಾಗಿದ್ದು, ಅವರನ್ನು ಬಂಧಿಸಿದ್ದಾರೆ.
ಓದಿ: ಜಾತಿ ಸೂಚಕ ಇರುವ ಗ್ರಾಮಗಳನ್ನು ರದ್ದುಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ : ಸಚಿವ ಆರ್. ಅಶೋಕ್