ಬೆಂಗಳೂರು: ನಗರದಲ್ಲಿ ಎರಡು-ಮೂರು ಗಂಟೆ ಸುರಿದ ಭಾರೀ ಮಳೆಗೆ ಕಟ್ಟಡ ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆ ಚದುರಿಹೋಗಿದೆ. ಫ್ರೀಡಂ ಪಾರ್ಕ್ ಮುಂಭಾಗದ ರಸ್ತೆಯಲ್ಲಿದ್ದ ವೇದಿಕೆಯ ಪರದೆಗಳೂ ಕೂಡಾ ಮಳೆಗೆ ತೇಯ್ದುಹೋಗಿವೆ.
ರಾಜ್ಯ ವಿವಿಧೆಡೆಯಿಂದ ಬಂದಿದ್ದ ಕಾರ್ಮಿಕರು ಮಳೆಗೆ ಆಶ್ರಯ ಪಡೆಯಲಾಗದೆ ಒದ್ದೆಯಾದರು. ಕುರ್ಚಿಗಳು, ತಾವು ತಂದಿದ್ದ ಬ್ಯಾಗ್‌ಗಳನ್ನು ಹಿಡಿದು ಮಳೆಯಿಂದ ಆಶ್ರಯ ಪಡೆದರು. ಮತ್ತೆ ಕೆಲವರು ಮರದಡಿ ನಿಂತು ಮಳೆಯಿಂದ ರಕ್ಷಣೆ ಪಡೆದರು.
ಕಟ್ಟಡ ಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ ಆಗಮಿಸಿ, ಮನವಿ ಸ್ವೀಕರಿಸಿದರು. ಆದರೆ ಅಷ್ಟರಲ್ಲಿ ಮಳೆ ಆರಂಭವಾಗಿದ್ದು, ಯಾವುದೇ ಭರವಸೆ ಪಡೆಯದೆ ಕಾರ್ಮಿಕರು ಚದುರಿ ಹೋದರು.
ಬೆಳಗ್ಗೆ 11 ಗಂಟೆಯಿಂದ 8 ಸಂಘಟನೆಗಳ ಆರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ರ್ಯಾಲಿ ನಡೆಸಿದರು. ಮೂರು ಗಂಟೆಯ ವೇಳೆಗೆ ಪ್ರತಿಭಟನೆ ಮುಕ್ತಾಯಗೊಂಡಿತು.
ಕಟ್ಟಡ ಕಾರ್ಮಿಕರ ಪ್ರಮುಖ ಬೇಡಿಕೆಗಳಿವು..
- 21 ಲಕ್ಷ ಕಳಪೆ ರೇಷನ್ ಕಿಟ್, ಟೂಲ್ ಕಿಟ್, ಇಮ್ಯುನಿಟಿ ಕಿಟ್, ದುಬಾರಿ ಕಾರು, ಟಿವಿ, ಆ್ಯಂಬ್ಯುಲೆನ್ಸ್ ಖರೀದಿಯಲ್ಲಿ ದೊಡ್ಡ ಮಟ್ಟದ ಹಗರಣವಾಗಿದ್ದು, ಸದನ ಸಮಿತಿಯಿಂದ ತನಿಖೆ ಮಾಡಿಸಬೇಕು.
- ಕಟ್ಟಡ ಕಾರ್ಮಿಕರ ಸಹಜ ಸಾವಿಗೆ 5 ಲಕ್ಷ ರೂ, ಅಪಘಾತ ಸಾವಿಗೆ 10 ಲಕ್ಷ ಪರಿಹಾರ ನೀಡಬೇಕು.
- ನಿವೃತ್ತಿ ವೇತನ ಪ್ರತಿ ತಿಂಗಳು 5 ಸಾವಿರ ರೂ ನೀಡಬೇಕು.
- ಕಟ್ಟಡ ನಿರ್ಮಾಣ ಕಾರ್ಮಿಕರ ಆಸ್ಪತ್ರೆ ವೆಚ್ಚದ ಶೇ 100 ಸರ್ಕಾರವೇ ನೀಡಬೇಕು.
- ಮದುವೆ ಸಹಾಯಧನ 50 ಸಾವಿರದಿಂದ 1ಲಕ್ಷಕ್ಕೆ ಹೆಚ್ಚಿಸಬೇಕು.
- ಕೋವಿಡ್ ಬಾಕಿ ಇರುವ ಪರಿಹಾರವನ್ನು ತಕ್ಷಣ ನೀಡಬೇಕು.
- ಕೋವಿಡ್‌ನಿಂದ ಮೃತಪಟ್ಟವರಿಗೆ 2 ಲಕ್ಷ ರೂ ಪರಿಹಾರ ನೀಡಬೇಕು.
- ಲಸಿಕೆ ಹೆಸರಲ್ಲಿ ಖಾಸಗಿ ಆಸ್ಪತ್ರೆಗೆ ಹಣ ನೀಡಬಾರದು.
- ಕಾರ್ಮಿಕ ಸಂಘಟನೆಗಳ ವಿವಿಧ ಅರ್ಜಿಯನ್ನು ಈ ತಕ್ಷಣ ಇತ್ಯರ್ಥಗೊಳಿಸಬೇಕು.
- ವಲಸಿಗರ ಹೆಸರಲ್ಲಿ ಭವ್ಯ ಸೌಧ ಕಟ್ಟುವ ಪ್ರಸ್ತಾವ ಕೈಬಿಡಬೇಕು.
- ಪ್ರಕೃತಿ ವಿಕೋಪ ಕಾಯ್ದೆ, ಕರ್ನಾಟಕ ಪಾರದರ್ಶಕತೆ ದುರುಪಯೋಗ ಯಾವುದಕ್ಕೂ ಟೆಂಡರ್ ಇಲ್ಲ.
- ಹೆರಿಗೆ ಭತ್ಯೆಯನ್ನು ಕಾರ್ಮಿಕರ ಪತ್ನಿಗೂ ವಿಸ್ತರಿಸಬೇಕು.