ಬೆಂಗಳೂರು: ನಗರದಲ್ಲಿ ಕಟ್ಟಡ ಕುಸಿತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದೀಗ ಕಸ್ತೂರಿನಗರದ ಡಾಕ್ಟರ್ಸ್ ಲೇಔಟ್ನಲ್ಲಿ ಐದು ಅಂತಸ್ತಿನ ಕಟ್ಟಡವೊಂದು ಧರೆಗುರುಳಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇಂದು ಮುಂಜಾನೆಯೇ ಕಟ್ಟಡ ವಾಲಿದ್ದರಿಂದ ನಿವಾಸಿಗಳು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ರಾಮಮೂರ್ತಿ ನಗರ ಠಾಣಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.
ಈ ಕಟ್ಟಡವು 2014 ರಲ್ಲಿ ನಿರ್ಮಾಣವಾಗಿದ್ದು, ಫಾರುಕ್ ಬೇಗ್ ಎಂಬುವರಿಗೆ ಸೇರಿದ್ದಾಗಿದೆ. ಬಿಲ್ಡಿಂಗ್ನಲ್ಲಿ ಒಟ್ಟು ಮೂರು ಕುಟುಂಬಗಳು ವಾಸಿಸುತ್ತಿದ್ದು, ಕಟ್ಟಡ ವಾಲುತ್ತಿದ್ದಂತೆಯೇ ಎಲ್ಲರೂ ಹೊರಬಂದಿದ್ದಾರೆ. ಎರಡು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು, ಕಾನೂನು ಬಾಹಿರವಾಗಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಇದರ ಜತೆಗೆ, ಈ ಕಟ್ಟಡದ ಮೇಲೆ ಪೆಂಟ್ಹೌಸ್ ಕಟ್ಟಲು ಮಾಲೀಕ ಫಾರುಕ್ ಮುಂದಾಗಿದ್ದು, ಕಾಮಗಾರಿ ಅರ್ಧದಲ್ಲಿತ್ತು. ಘಟನೆ ಸಂಭವಿಸುತ್ತಿದ್ದಂತೆಯೇ ಫಾರುಕ್ ತಲೆ ಮರೆಸಿಕೊಂಡಿದ್ದಾನೆ.
ಸ್ಥಳಕ್ಕೆ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಮತ್ತು ಬಿಬಿಎಂಪಿ ಜಂಟಿ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ರಾತ್ರಿ ಬಿಬಿಎಂಪಿ ಮತ್ತು ಪೊಲೀಸರ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ತೆರವು ಕಾರ್ಯಾಚರಣೆ ಮಾಡಲಿದೆ. ಕಟ್ಟಡ ಮಾಲೀಕ ಫಾರುಕ್ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಹದಿನೈದು ದಿನಗಳಲ್ಲಿ ನಗರದಲ್ಲಿ ನಡೆದ ಮೂರನೇ ದುರಂತ ಇದಾಗಿದೆ. ಲಕ್ಕಸಂದ್ರ, ಬಮೂಲ್ನಲ್ಲಿ ಕಟ್ಟಡ ಕುಸಿತ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.
ಇದನ್ನೂ ಓದಿ: ಲಕ್ಕಸಂದ್ರ ಕಟ್ಟಡ ಕುಸಿತ ಪ್ರಕರಣ : ಬಿಲ್ಡಿಂಗ್ ಮಾಲೀಕ ಸುರೇಶ್ ಬಂಧನ