ಬೆಂಗಳೂರು : ರಾಜ್ಯದ ಹಲವೆಡೆ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಭಾರಿ ಮಳೆಗೆ ಚಿಕ್ಕಪೇಟೆಯಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಕಟ್ಟಡದ ನೆಲ ಅಂತಸ್ತಿನಲ್ಲಿ ಮೂರು ಅಂಗಡಿಗಳಿದ್ದು ಬೆಳಗ್ಗಿನ ಜಾವವಾಗಿದ್ದರಿಂದ ಯಾರೂ ಇರಲಿಲ್ಲ. ಎರಡು ಹಾಗೂ ಮೂರನೆ ಅಂತಸ್ತಿಗೆ ಓರ್ವ ಮಾಲೀಕನಿದ್ದು ಸದ್ಯ ಖಾಲಿ ಇತ್ತು. ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕಟ್ಟಡ ಕುಸಿದಿದ್ದು, ಗ್ರೌಂಡ್ ಫ್ಲೋರ್ ನಲ್ಲಿದ್ದ ಮೂರು ಬಟ್ಟೆ ಅಂಗಡಿಗಳು ನೆಲಸಮಗೊಂಡಿವೆ. ಸದ್ಯ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಈ ಕಟ್ಟಡವನ್ನು ತೆರವುಗೊಳಿಸುವಂತೆ 10 ವರ್ಷಗಳ ಹಿಂದೆಯೇ ಕಟ್ಟಡ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ನೀಡಿತ್ತು. ಆದರೆ, ಕಟ್ಟಡದ 4 ಮಂದಿ ಮಾಲೀಕರ ಮನಸ್ತಾಪದಿಂದ ತೆರವು ಆಗದೇ ಹಾಗೆ ಉಳಿದಿತ್ತು. ಹಬ್ಬದ ಸಮಯ ಜನರ ಓಡಾಟ ಹೆಚ್ಚಾಗಿತ್ತು. ಆದರೆ, ರಾತ್ರಿ ನಡೆದ ಘಟನೆಯಿಂದ ಅನಾಹುತ ತಪ್ಪಿದೆ ಎಂದು ಮಾಲೀಕರಲ್ಲಿ ಓರ್ವರಾದ ಮಹೇಂದ್ರ ಭಂಡಾರಿ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಸಿಟಿ ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಬೆಳಗ್ಗೆ ಮೂರುವರೇ ಸುಮಾರಿಗೆ ಘಟನೆ: ಈ ಕುರಿತು ಪ್ರತಿಕ್ರಿಯಿಸಿರುವ ಮಳಿಗೆ ಮಾಲಕ ಅಖಿಲ್, ಈ ಕಟ್ಟಡ ಮೂವರು ಅಣ್ಣ ತಮ್ಮಂದಿರಿಗೆ ಸೇರಿದ್ದಾಗಿದೆ. ಮೇಲಿನ ಎರಡು ಅಂತಸ್ತಿನಲ್ಲಿ ಯಾರು ವಾಸವಾಗಿರಲಿಲ್ಲ. ಮಳೆ ಬಂದಾಗ ನೀರು ಸೋರುತಿತ್ತು. ಮೇಲಿನ ಕಟ್ಟಡ ಕಳೆದ ಇಪ್ಪತ್ತು ವರ್ಷಗಳಿಂದ ಖಾಲಿ ಇದೆ. ಬೆಳಗ್ಗೆ ಮೂರುವರೇ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ಹೇಳಿದ್ದಾರೆ.
ಓದಿ : ಭಟ್ಕಳ ಮುಟ್ಟಳ್ಳಿಯಲ್ಲಿ ಮತ್ತೆ ಗುಡ್ಡಕುಸಿತ : ಹತ್ತಕ್ಕೂ ಅಧಿಕ ಕುಟುಂಬ ಸ್ಥಳಾಂತರ