ಬೆಂಗಳೂರು: ನಾಳೆಯಿಂದ ಒಂದು ತಿಂಗಳ ಸುದೀರ್ಘ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಮಾ. 2ರಿಂದ 31ರ ವರೆಗೆ ಸುಧೀರ್ಘ ಬಜೆಟ್ ಕಲಾಪ ನಡೆಯಲಿದ್ದು, ಮಾ.5 ರಂದು ಸಿಎಂ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನದ ಮೊದಲ ದಿನವಾದ ನಾಳೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಉತ್ತರ ನೀಡಲಿದ್ದಾರೆ. ಬಳಿಕ ಮಾರ್ಚ್ 3 ಮತ್ತು 4 ಎರಡು ದಿನಗಳ ಕಾಲ ಸಂವಿಧಾನದ ಕುರಿತು ಚರ್ಚೆ ನಡೆಯಲಿದೆ.
8 ವಿಧೇಯಕಗಳ ಮಂಡನೆ: ನಾಳೆ ರಾಜ್ಯಪಾಲರ ಭಾಷಣ ಮೇಲಿನ ಚರ್ಚೆಗೆ ಉತ್ತರ ನೀಡಿದ ಬಳಿಕ ವಿಧಾನಸಭೆಯಲ್ಲಿ ಒಟ್ಟು 8 ವಿಧೇಯಕಗಳು ಮಂಡನೆಯಾಗಲಿದೆ. ಈ ಪೈಕಿ 4 ವಿಧೇಯಕಗಳನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಮಂಡಿಸಲಿದ್ದಾರೆ. ರಾಜ್ಯ, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ, ಪುರಸಭೆ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕ, ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ತಿದ್ದುಪಡಿ ವಿಧೇಯಕ, ರಾಜ್ಯ ರೇಸ್ ಕೋರ್ಸ್ಗಳಿಗೆ ಪರವಾನಗಿ ನೀಡುವ ತಿದ್ದುಪಡಿ ವಿಧೇಯಕವನ್ನು ಸಿಎಂ ಮಂಡಿಸಲಿದ್ದಾರೆ.
ಬಳಿಕ ಡಿಸಿಎಂ ಅಶ್ವಥ್ ನಾರಾಯಣ , ರಾಜ್ಯ ವಿವಿ ತಿದ್ದುಪಡಿ ವಿಧೇಯಕ-2020, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನದ ನಿಯಂತ್ರಣ ವಿಧೇಯಕವನ್ನು ಮಂಡಿಸಲಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್, ಕರ್ನಾಟಕ ರಾಜ್ಯ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ ಹಾಗೂ ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ಮಂಡಿಸಲಿದ್ದಾರೆ.