ಬೆಂಗಳೂರು: ಈ ಸಾಲಿನ ಬಜೆಟ್ನಲ್ಲಿ ಬಂದರು ಅಭಿವೃದ್ಧಿ ಸಂಬಂಧ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರದ ಸಾಗರ ಮಾಲಾ ಯೋಜನೆಯಡಿ 1,880 ಕೋಟಿ ರೂ. ಅಂದಾಜು ವೆಚ್ಚದ 24 ಯೋಜನೆ ಅನುಷ್ಠಾನ ಹಾಗೂ ಕಾರವಾರ ಬಂದರಿನ ವಿಸ್ತರಣೆಗೆ ಸರ್ಕಾರ ಮುಂದಾಗಿದೆ.
ಬೈಂದೂರು ಮತ್ತು ಮಲ್ಪೆಗಳಲ್ಲಿ ವಿವಿಧೋದ್ದೇಶ ಬಂದರು ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ತಯಾರಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 250 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿದೆ.
ಇದನ್ನೂ ಓದಿ: ದೇವಾಲಯಗಳ ತಸ್ತೀಕ್ ಮೊತ್ತ 60 ಸಾವಿರಕ್ಕೆ ಹೆಚ್ಚಳ; ಆಡಳಿತ ಸುಧಾರಣೆ, ಸಾರ್ವಜನಿಕ ಸೇವೆಗಳಿಗೆ ಮನ್ನಣೆ
350 ಕೋಟಿ ರೂ. ವೆಚ್ಚದಲ್ಲಿ ಹಳೆ ಮಂಗಳೂರು ಬಂದರಿನಲ್ಲಿ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಕ್ಕೆ ಮೀಸಲಾದ ಜೆಟ್ಟಿ ಮತ್ತು ಇತರ ಸಂಬಂಧಿತ ಮೂಲಸೌಕರ್ಯ ಸೌಲಭ್ಯ ಸ್ಥಾಪನೆಗೆ ಒತ್ತು ನೀಡಿರುವ ಸರ್ಕಾರ, ಉತ್ತರ ಕನ್ನಡ ಜಿಲ್ಲೆಯ ಕೇಣಿ-ಬೆಳಕೇರಿಯಲ್ಲಿ ಗ್ರೀನ್ ಫೀಲ್ಡ್ ಬಂದರು ಅಭಿವೃದ್ಧಿಗೆ ಮುಂದಾಗಿದೆ. ಹಾಗೆ ಕಾರವಾರದಲ್ಲಿ ರಾಜ್ಯದ ಮೊದಲ ಜಲಸಾರಿಗೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿದೆ.