ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಶುಕ್ರವಾರ ನಡೆದ ಟಿಸಿಎಸ್ ಪ್ರಾಯೋಜಿತ ಗ್ರಾಮೀಣ ಐಟಿ ಕ್ವಿಜ್‌ನಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಸರ್ಕಾರಿ ಮಾದರಿ ಉನ್ನತ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿ ಶ್ರೀನಂದ್ ಸುಧೀಶ್ ಮತ್ತು ರಾಜಸ್ಥಾನದ ಸೂರತ್‌ಗಢದ ಸ್ವಾಮಿ ವಿವೇಕಾನಂದ ಸರ್ಕಾರಿ ಶಾಲೆಯ ವಿದ್ಯಾರ್ಥಿ ವಿವೇಕ್ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಇವರಿಬ್ಬರಿಗೂ ಕ್ರಮವಾಗಿ 1 ಲಕ್ಷ ರೂ. ಮತ್ತು 50 ಸಾವಿರ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ಬಹುಮಾನವಾಗಿ ನೀಡಲಾಯಿತು. ಸುಮಾರು ಎರಡು ಗಂಟೆಗಳ ಕಾಲ ಎಂಟು ಸ್ಪರ್ಧಿಗಳ ನಡುವೆ ನಡೆದ ಅಂತಿಮ ಹಣಾಹಣಿಯನ್ನು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಕುತೂಹಲದಿಂದ ವೀಕ್ಷಿಸಿ, ದೇಶದ ಗ್ರಾಮೀಣ ಪ್ರತಿಭೆಗಳ ಬೆನ್ನು ತಟ್ಟಿದರು.
ಈ ವೇಳೆ ಮಾತನಾಡಿದ ಅವರು, 8 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಅವಕಾಶವಿದ್ದ ಈ ವರ್ಷದ ಕ್ವಿಜ್‌ನಲ್ಲಿ 28 ರಾಜ್ಯಗಳ ಒಟ್ಟು 4.70 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದು ದಾಖಲೆ. ಇದು ಗ್ರಾಮೀಣ ಭಾರತದ ಪ್ರತಿಭೆಯ ಅಗಾಧತೆಗೆ ಸಾಕ್ಷಿಯಾಗಿದೆ. ಕರ್ನಾಟಕ ಸರ್ಕಾರ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳಿಗೆಂದು ನಡೆಸುತ್ತಿರುವ ಈ ಸ್ಪರ್ಧೆಯನ್ನು ಟಿಸಿಎಸ್ ಕಂಪನಿ 2000ನೇ ಇಸವಿಯಿಂದಲೂ ಪ್ರಾಯೋಜಿಸುತ್ತಿದೆ. ಇದರ ಮೊದಲ ಆವೃತ್ತಿಯನ್ನು ಡಾ.ಅಬ್ದುಲ್ ಕಲಾಂ ಅವರು ಉದ್ಘಾಟಿಸಿದ ನೆನಪು ಹಸಿರಾಗಿದೆ ಎಂದರು.
ಮಾಹಿತಿ ತಂತ್ರಜ್ಞಾನದ ಅರಿವು ಮೂಡಿಸುವ ಉದ್ದೇಶ: ಇದುವರೆಗೆ 2 ಕೋಟಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದು, ಇದು ಭಾರತದ ಪ್ರಪ್ರಥಮ ಗ್ರಾಮೀಣ ಐಟಿ ರಸಪ್ರಶ್ನೆ ಕಾರ್ಯಕ್ರಮವೆಂದು ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿದೆ. ಈ ರಸಪ್ರಶ್ನೆ ಮೊದಲು ಕೇವಲ ಎಂಟು ರಾಜ್ಯಗಳಿಗೆ ಸೀಮಿತವಾಗಿತ್ತು. ಈಗ ಇದು ಬಹುಮಟ್ಟಿಗೆ ಇಡೀ ದೇಶವನ್ನು ಒಳಗೊಂಡಿದ್ದು, ಜನಪ್ರಿಯವಾಗಿದೆ. ನಮ್ಮ ಸಣ್ಣಪುಟ್ಟ ಪಟ್ಟಣಗಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ ರಮಣ ರೆಡ್ಡಿಯವರು 23 ವರ್ಷಗಳಿಂದಲೂ ಈ ರಸಪ್ರಶ್ನೆ ಕಾರ್ಯಕ್ರಮದ ಬೆನ್ನೆಲುಬಾಗಿರುವುದು ಅಭಿನಂದನಾರ್ಹ ಸಂಗತಿ ಎಂದರು.
ಪ್ರತಿಭೆಗೆ ಮನ್ನಣೆ: ಟಿಸಿಎಸ್ ಬೆಂಗಳೂರು ಕೇಂದ್ರದ ಮುಖ್ಯಸ್ಥರಾದ ಸುನೀಲ್ ದೇಶಪಾಂಡೆ ಮಾತನಾಡಿ, "ರಸಪ್ರಶ್ನೆ ವಿಜೇತರು ಉದ್ಯೋಗ ಬೇಕೆಂದಾಗ ನೇರವಾಗಿ ಟಿಸಿಎಸ್‌ಗೆ ಬರಬಹುದು. ನಮ್ಮ ಕಂಪನಿಯು ಪ್ರತಿಭೆಗೆ ಮನ್ನಣೆ ನೀಡುತ್ತದೆ. ಈ ಪ್ರತಿಭಾವಂತರಿಗೆ ನಿರುದ್ಯೋಗದ ಆತಂಕವೇನೂ ಇಲ್ಲ. ಇಂಥವರನ್ನು ನಾವು ಉಳಿಸಿಕೊಂಡು, ಪ್ರೋತ್ಸಾಹಿಸಬೇಕಾದ್ದು ಅಗತ್ಯವಾಗಿದೆ ಎಂದರು.
ಸ್ಪರ್ಧಿಗಳು: ಉತ್ತರ ಪ್ರದೇಶದ ಅಭಿನವ್ ದುಬೆ, ಆಂಧ್ರಪ್ರದೇಶದ ವನ್ನಂ ಭಾನುಪ್ರಣೀತ್, ಮಧ್ಯಪ್ರದೇಶದ ಅಮನ್‌ಕುಮಾರ್ ಅಂಜನಾ, ಛತ್ತೀಸ್‌ಗಢದ ಉದಿತ್ ಪ್ರತಾಪ್ ಸಿಂಗ್, ಗುಜರಾತಿನ ಪಟೇಲ್ ಋಷಿ ಹೇಮಂತ್ ಮತ್ತು ಗೋವಾದ ವಿಘ್ನೇಶ್ ಮೌಸೋ ಶೇಟ್ಯೆ ಫೈನಲ್‌ನ ಉಳಿದ ಸ್ಪರ್ಧಿಗಳಾಗಿದ್ದರು. ಟಿಸಿಎಸ್ ಕಂಪನಿಯು ಇವರಿಗೂ ವಿದ್ಯಾರ್ಥಿ ವೇತನದ ರೂಪದಲ್ಲಿ ಸಮಾಧಾನಕರ ಬಹುಮಾನಗಳನ್ನು ನೀಡಿತು.
ಬಿಟಿ ಕ್ವಿಜ್-ಬೆಂಗಳೂರಿನ ಮೈಥಿಲಿ ಪ್ರಥಮ: ಬಿಟಿಎಸ್-25ರ ಅಂಗವಾಗಿ ನಡೆದ ಬಯೋಟೆಕ್ ರಸಪ್ರಶ್ನೆಯಲ್ಲಿ ಕರ್ನಾಟಕದ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್ನ ವಿದ್ಯಾರ್ಥಿನಿ ಮೈಥಿಲಿ 50 ಸಾವಿರ ರೂ.ಗಳ ಪ್ರಥಮ ಬಹುಮಾನಕ್ಕೆ ಪಾತ್ರರಾದರು.
ಪಶ್ಚಿಮ ಬಂಗಾಳದ ಸಹೇಲಿ ಬಸು ರಾಯ್, ಮೋತಿಲಾಲ್ ನೆಹರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಶಿಕಾ ಅಗರವಾಲ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಬಯೋ ಇನ್ಫರ್ಮ್ಯಾಟಿಕ್ಸ್ ಅಂಡ್ ಬಯೋಟೆಕ್ನಾಲಜಿಯ ಜಾಹ್ನವಿ ಪಲ್ಸೋಡಕರ್ ಕ್ರಮವಾಗಿ ದ್ವಿತೀಯ (25 ಸಾವಿರ ರೂ), ತೃತೀಯ (15 ಸಾವಿರ ರೂ) ಮತ್ತು ಚತುರ್ಥ (10 ಸಾವಿರ ರೂ.) ಸ್ಥಾನ ಪಡೆದುಕೊಂಡರು.
ಇದನ್ನೂ ಓದಿ: 5 ಹೆಗ್ಗುರಿಗಳೊಂದಿಗೆ 25ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ತೆರೆ