ಬೆಂಗಳೂರು: ಅನರ್ಹ ಶಾಸಕರಿಗೆ ಈ ಹಿಂದೆ ರಾಜ್ಯಾಧ್ಯಕ್ಷರಾಗಿದ್ದ ವೇಳೆ ಯಡಿಯೂರಪ್ಪ ಯಾವ ಭರವಸೆ ನೀಡಿದ್ದರೋ ಅದರ ಪ್ರಕಾರವೇ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಬರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,15 ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆ ಮಾಡಲಾಗಿದೆ. ಇದು ಕೇಂದ್ರ ಚುನಾವಣಾ ಆಯೋಗದ ವಿವೇಚನೆಗೆ ಬಿಟ್ಟಿದ್ದು. ಮೊದಲು ನ್ಯಾಯಾಲಯದ ಆದೇಶದ ಪ್ರಕಾರ ರದ್ದು ಮಾಡಿದ್ದರು. ನಂತರ ಮತ್ತೊಂದು ದಿನಾಂಕ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.
ಈ ಮೊದಲು ಅನರ್ಹ ಶಾಸಕರ ಜತೆ ಬಿ ಎಸ್ ಯಡಿಯೂರಪ್ಪ ಏನು ಮಾತುಕತೆ ಆಡಿದ್ದಾರೋ,ಆ ಮಾತಿನ ಪ್ರಕಾರವೇ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಇಲ್ಲವಾದರೆ ಅನರ್ಹರು ಯಾರ ಹೆಸರನ್ನು ಸೂಚಿಸುತ್ತಾರೋ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದರು.
ಒಂದು ದೇಶ ಒಂದು ಸಂವಿಧಾನ:
ಬಿಟಿಎಂ ಬಡಾವಣೆಯಲ್ಲಿ ರಾಷ್ಟ್ರೀಯ ಏಕತಾ ಅಭಿಯಾನದ ಅಂಗವಾಗಿ 'ಒಂದು ದೇಶ ಒಂದು ಸಂವಿಧಾನ' ವ್ಯಾಖ್ಯಾನದಡಿ ಜನ ಜಾಗರಣಾ ಕಾರ್ಯಕ್ರಮ ನಡೆಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಸತೀಶ್ ರೆಡ್ಡಿ, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್,ಬಿಜೆಪಿ ಮುಖಂಡ ಗೋಪಿನಾಥ ರೆಡ್ಡಿ ಭಾಗಿಯಾಗಿದ್ದರು.
ಸಮಾರಂಭದಲ್ಲಿ ಮಾತನಾಡಿದ ಜೋಷಿ, ಬ್ರಿಟಿಷರ ಒಡೆದು ಆಳುವ ನೀತಿ, ಪಂಡಿತ್ ನೆಹರು ಅವರ ತಪ್ಪು ನಿರ್ಧಾರದಿಂದಾಗಿ ಭಾರತ ಮೂರನೇ ಒಂದು ಭಾಗದಷ್ಟು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡುವಂತಾಯ್ತು. ಪಂಡಿತ್ ನೆಹರು ನ್ಯಾಷನಲ್ ಕಾನ್ಫರೆನ್ಸ್ನ ಶೇಖ್ ಅಬ್ದುಲ್ಲಾ ಜತೆ ವಿಶೇಷ ನಂಟು ಹೊಂದಿದ್ದರು.ಕಾಶ್ಮೀರದ ರಾಜ ಹರಿಸಿಂಗ್ನನ್ನು ಬಂಧಿಸಲು ಶೇಖ್ ಅಬ್ದುಲ್ಲಾ ಆಂದೋಲನ ಆರಂಭಿಸಿದಾಗ, ಶೇಖ್ ಅಬ್ದುಲ್ಲಾ ಪರ ವಕಾಲತ್ತು ವಹಿಸಿ,ಹರಿಸಿಂಗ್ ಬಂಧನಕ್ಕೆ ನೆರವು ನೀಡಿದವರು ಪಂಡಿತ್ ನೆಹರು ಎಂದು ಆರೋಪಿಸಿದರು.