ಬೆಂಗಳೂರು : ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವ ಸಾಧ್ಯತೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪರೋಕ್ಷ ಸುಳಿವು ನೀಡಿದ್ದಾರೆ.
ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ದೂರವಾಣಿ ಸಂಖ್ಯೆಯನ್ನು ಅನಾವರಣಗೊಳಿಸಿ ಮಾತನಾಡಿದ ಬಿಎಸ್ ವೈ, ರಾಜ್ಯದಲ್ಲಿ ಸರ್ಕಾರ ಹಗಲು ದರೋಡೆ ನಡೆಸುತ್ತಿದೆ. ಕಾಮಗಾರಿಯೇ ಆಗದೆ ಲೋಕೋಪಯೋಗಿ ಇಲಾಖೆಯಲ್ಲಿ ಬಿಲ್ ಪಾವತಿ ಮಾಡಲಾಗಿದೆ ಎಂದು ಆರೋಪಿಸಿದರು.
ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು ಕಾದು ನೋಡಿ. ಈಗಾಗಲೇ ದೇವೇಗೌಡರೇ ಸರ್ಕಾರ ಬಹಳ ದಿನ ಉಳಿಯಲ್ಲ ಅಂತ ಹೇಳಿದ್ದಾರೆ. ಜನರ ಅಭಿಪ್ರಾಯ ಕೂಡ ಅದೇ ಆಗಿದೆ. ಜನಾಭಿಪ್ರಾಯಕ್ಕೆ ಸ್ಪಂದಿಸಬೇಕಿರುವುದು ನಮ್ಮ ಕರ್ತವ್ಯ ಎಂದು ಮೈತ್ರಿ ಸರ್ಕಾರಕ್ಕೆ ಅವರು ಎಚ್ಚರಿಕೆಯ ಸಂದೇಶ ರವಾನಿಸಿದರು.
ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ರೆ ಅವರ ತಂದೆ ಮಧ್ಯಂತರ ಚುನಾವಣೆಗೆ ಹೋಗುತ್ತೇವೆ ಎನ್ನುತ್ತಾರೆ. ನಾವು 105 ಶಾಸಕರು ಮತ್ತು ಅತೃಪ್ತ ಶಾಸಕರು ನಮ್ಮ ಜೊತೆಯಲ್ಲಿದ್ದಾರೆ. ನಿಮ್ಮ ಕೈಯಲ್ಲಿ ಸರ್ಕಾರ ನಡೆಸುವುದು ಸಾಧ್ಯವಾಗದೇ ಇದ್ದರೆ ರಾಜೀನಾಮೆ ನೀಡಿ. ನಾವು ಸರ್ಕಾರ ರಚನೆ ಮಾಡುತ್ತೆವೆ ಎಂದು ಯಡಿಯೂರಪ್ಪ ಹೇಳಿದರು.
ಈ ಸರ್ಕಾರ ಇನ್ನು ಹೆಚ್ಚು ದಿನ ಉಳಿಯಲ್ಲ, ಜನತಾದರ್ಶನ ಅಂತ ಜನರಿಗೆ ಇಲ್ಲ ಸಲ್ಲದ ಸುಳ್ಳು ಭರವಸೆ ನೀಡಿ ಜನರನ್ನು ಮರಳು ಮಾಡುವ ಪ್ರಯತ್ಯ ಸಫಲವಾಗುವುದಿಲ್ಲ. ಮಳೆ ಕುಂಟು ನೆಪ ಹೇಳಿ ಗ್ರಾಮ ವಾಸ್ತವ್ಯ ರದ್ದು ಮಾಡಿದ್ದಾರೆಯ. ಇದೆಲ್ಲ ಏಕೆ? ಈ ಹಿಂದೆ ಗ್ರಾಮವಾಸ್ತವ್ಯದಲ್ಲಿ ಸಿಎಂ ನೀಡಿದ ಭರವಸೆಗಳು ಯಾವುದೂ ಈಡೇರಿಲ್ಲ. ಈ ಕುರಿತು ಪುಸ್ತಕವೊಂದನ್ನು ಬಿಡುಗಡೆ ಮಾಡುತ್ತೇವೆ. ಬರ ಪರಿಸ್ಥಿತಿ ಬಗ್ಗೆ ಗಮನ ಹರಿಸಬೇಕು ಅದು ಬಿಟ್ಟು ಈ ರೀತಿಯ ಆಟ ಆಡುವುದು ಏಕೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ಬರ ಪರಿಸ್ಥಿತಿ ಸಂದರ್ಭದಲ್ಲಿ ನಾವು ಜನರ ಪರವಾಗಿ ನಿಲ್ಲಬೇಕು. ಆಡಳಿತ ಪಕ್ಷ ಏನು ಮಾಡುತ್ತೋ, ಬಿಡುತ್ತೋ. ನಾವು ಪ್ರತಿಪಕ್ಷ ಶಾಸಕರಾಗಿ ಜವಾಬ್ದಾರಿ ಅರಿತು ನಮ್ಮ ನಮ್ಮ ಕ್ಷೇತ್ರಗಳಲ್ಲಿ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಗಳ ಮೂಲಕ ಶುದ್ದ ಕುಡಿಯುವ ನೀರು ಪೂರೈಕೆ ಮಾಡಬೇಕು. ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು. ನೀವು ಕೈಗೊಂಡಿರುವ ಬರ ಪರಿಹಾರ ಕಾಮಗಾರಿಗಳ ಬಗ್ಗೆ ವಾರಕ್ಕೊಮ್ಮೆ ಕೇಂದ್ರ ಕಚೇರಿಗೆ ವರದಿ ಕಳುಹಿಸಿಕೊಡಿ ಎಂದು ಯಡಿಯೂರಪ್ಪ ಪಕ್ಷದ ಶಾಸಕರಿಗೆ ಸೂಚನೆ ನೀಡಿದರು.