ಬೆಂಗಳೂರು: ದೇಶ ಲಾಕ್ಡೌನ್ ಸ್ಥಿತಿಯಲ್ಲಿದೆ. ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸಲಾಗದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಯಡಿಯೂರಪ್ಪ ಅನ್ನದಾತರಿಗೆ ಅಭಯ ನೀಡಿದ್ದಾರೆ.
ರೈಲುಗಳ ಮೂಲಕ ಹಣ್ಣು-ತರಕಾರಿ ರವಾನಿಸಲು ಚಿಂತನೆ:
ಹಾಪ್ಕಾಮ್ಸ್ಗಳನ್ನು ಬೆಳಗ್ಗೆಯಿಂದ-ರಾತ್ರಿಯವರೆಗೆ ತೆರೆಯಲು ಈಗಾಗಲೇ ಸೂಚನೆ ನೀಡಲಾಗಿದೆ. ರೈಲುಗಳ ಮೂಲಕ ರೈತರು ಹಣ್ಣು-ತರಕಾರಿ ರವಾನಿಸುವ ಕುರಿತು ಚಿಂತನೆ ನಡೆಸಿದ್ದಾಗಿ ಸಿಎಂ ತಿಳಿಸಿದರು.
ರೇಷ್ಮೆ ಮಾರುಕಟ್ಟೆ ನಾಳೆಯಿಂದ ಓಪನ್:
ರೇಷ್ಮೆ ಮಾರುಕಟ್ಟೆ ನಾಳೆಯಿಂದಲೇ ಓಪನ್ ಆಗಲಿದೆ. ಮಾರುಕಟ್ಟೆಗಳಿಗೆ ರೈತರೇ ತೆರಳಿ ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದು.
ಹಾಪ್ಕಾಮ್ಸ್ನಲ್ಲಿ ಮೊಟ್ಟೆ ಮಾರಾಟಕ್ಕೆ ಅವಕಾಶ:
ಮೊಟ್ಟೆ,ಕೋಳಿ ತಿನ್ನುವುದರಿಂದ ಯಾರಿಗೂ ಯಾವುದೇ ಸಮಸ್ಯೆ ಇಲ್ಲ. ಹಾಪ್ಕಾಮ್ಸ್ನಲ್ಲಿ ಮೊಟ್ಟೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು.
ಕೆಎಂಎಫ್ ಹೆಚ್ಚುವರಿ ಹಾಲು ಬಡವರಿಗೆ ವಿತರಣೆ:
ಕೆಎಂಎಫ್ನಲ್ಲಿನ ಹೆಚ್ಚುವರಿ ಇರುವ ಹಾಲನ್ನು ಸರ್ಕಾರವೇ ಖರೀದಿಸಿ ಬಡವರಿಗೆ ನೀಡಲಿದೆ. ಇನ್ನುಳಿದಂತೆ ಜನರಿಗೆ ಬೇಕಾದ ಅಗತ್ಯ ವಸ್ತುಗಳ ಪೊರೈಸಲು ಸರ್ಕಾರ ಬದ್ಧವಾಗಿದೆ. ಹತ್ತಿ ನಿಗಮ ಪ್ರಾರಂಭಿಸಲು ಸೂಚಿಸಲಾಗಿದೆ ಎಂದರು.
ಸರಕು ಸಾಗಾಣೆ ವಾಹನ ತಡೆಯದಂತೆ ಕಟ್ಟುನಿಟ್ಟಿನ ಸೂಚನೆ:
ಸರಕು ಸಾಗಾಣೆ ವಾಹನ ತಡೆಯದಂತೆ ರಾಜ್ಯ ಸರ್ಕಾರ ಖಡಕ್ ಆದೇಶ ನೀಡಲಾಗಿದೆ. ಇದರ ಹೊರತಾಗಿಯೂ ವಾಹನಗಳನ್ನು ಅನಗತ್ಯವಾಗಿ ತಡೆದರೆ ಅದಿಕಾರಿಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಲು ಅವಕಾಶವಿದೆ. ರಾಜ್ಯದಲ್ಲಿ ಬೆಳೆ ಕಟಾವು, ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೊರೈಕೆಗೆ ಯಾವುದೇ ತೊಂದರೆ ಇಲ್ಲ.
ಮದ್ಯ ಮಾರಾಟ ಏಪ್ರಿಲ್ 14 ವರೆಗಿಲ್ಲ:
ಇದೇ ವೇಳೆ ಮದ್ಯಪಾನ ಮಾಡುವವರು ಏಪ್ರಿಲ್ 14ರವರೆಗೆ ಕಾಯಬೇಕು ಎಂದರು.