ಬೆಂಗಳೂರು: ದುಡ್ಡಿಲ್ಲದ, ಜನಪರ ಅಭಿವೃದ್ಧಿಗೆ ಮುಂದಾಗದ ಸರ್ಕಾರವೇ ದಾರಿದ್ರ್ಯ ಸರ್ಕಾರ. ಸಿಎಂ ಬಿಎಸ್‌ವೈ ದಾರಿದ್ರ್ಯ ಸರ್ಕಾರದ ಮುಖ್ಯಮಂತ್ರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಹೇಳಿಕೆ ಸಮರ್ಥಿಸಿದ್ದಾರೆ.
ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಿಗೆ ₹ 2 ಕೋಟಿ ಅನುದಾನ ರಿಲೀಸ್ ಮಾಡಿಲ್ಲ. ಶಿಕ್ಷಕರಿಗೆ ಮೂರು ತಿಂಗಳ ವೇತನವನ್ನೇ ನೀಡಿಲ್ಲ. ನಮ್ಮ ಅವಧಿಯಲ್ಲಿ ಏನಾದ್ರೂ ಹೀಗೆ ಆಗಿತ್ತಾ? ಯಾರಿಗಾದರೂ ಹಣ ಪೆಂಡಿಂಗ್ ಇದೆಯಾ ಹೇಳಿ? ಎಂದು ಪ್ರಶ್ನಿಸಿದರು.
ಉಪಚುನಾವಣೆಯಲ್ಲಿ ಒಬ್ಬರಿಗೆ ಎಷ್ಟು ಖರ್ಚು ಮಾಡಿದ್ದಾರೆ ಎಂಬುದರ ಬಗ್ಗೆ ಯಡಿಯೂರಪ್ಪ ಹೃದಯ ಮುಟ್ಟಿಕೊಂಡು ಹೇಳಲಿ. ಭ್ರಷ್ಟಾಚಾರದ ವಿರುದ್ಧ ಅಧಿಕಾರಿಗಳ ಮೇಲೆ ಯಡಿಯೂರಪ್ಪ ರೋಷಾವೇಷ ಹೊರ ಹಾಕಿದ್ದಾರೆ. ಭ್ರಷ್ಟಾಚಾರದ ಮೂಲ ಯಾರು? ಅವರೇ ಹೇಳಲಿ. ಇದರ ಬಗ್ಗೆ ನಾನು ಇಲ್ಲಿ ಮಾತನಾಡಲ್ಲ. ಸದನದಲ್ಲಿ ಇದರ ಬಗ್ಗೆ ಪ್ರಶ್ನಿಸುತ್ತೇನೆ ಎಂದು ಕಟುವಾಗಿ ಉತ್ತರಿಸಿದರು.
ಎಷ್ಟು ನೆರೆ ಸಂತ್ರಸ್ತರಿಗೆ ಪರಿಹಾರ ಸಿಕ್ಕಿದೆ? ಮನೆ ಕಳೆದುಕೊಂಡವರಿಗೆ ಸರಿಯಾಗಿ ಪರಿಹಾರ ನೀಡಿದ್ದಾರಾ? 25 ಸಂಸದರಿದ್ದಾರೆ, ಪ್ರಧಾನಿಗೆ ಅನುದಾನ ನೀಡುವಂತೆ ಒತ್ತಡ ಹಾಕಿದ್ದಾರಾ? ಎಂದು ಬಿಎಸ್‌ವೈ ಹಾಗೂ ಸಂಸದರ ವಿರುದ್ಧ ಕಿಡಿಕಾರಿದರು.