ಬೆಂಗಳೂರು: ಯಡಿಯೂರಪ್ಪ ಅವರ ವಿಶೇಷತೆಯನ್ನು ರಾಜ್ಯದ ಜನತೆ ಅರ್ಥ ಮಾಡಿಕೊಂಡಿದ್ದಾರೆ. ರಾಜ್ಯಕ್ಕೂ ಪಕ್ಷಕ್ಕೂ ಅನುಕೂಲ ಆಗುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬೆಂಗಳೂರಿನ ಟೌನ್ ಹಾಲ್ ನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ತೆಗೆದುಕೊಳ್ಳುವ ಸ್ಪಾಟ್ ಡಿಸಿಷನ್ ಪಕ್ಷಕ್ಕೆ ಅನುಕೂಲ ಆಗಲಿದೆ. ಯಡಿಯೂರಪ್ಪ ವಿಶೇಷತೆಯನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕು. ನಾನು ಅನೇಕ ಬಾರಿ ಅವರ ಜೊತೆ ಇದ್ದೆ. ಅವರು ತೆಗೆದುಕೊಂಡಿದ್ದು ಸ್ಪಾಟ್ ಡಿಸಿಷನ್. 1989ನೇ ಇಸ್ವಿಯಿಂದ ನಾನು ಅವರನ್ನು ನೋಡಿದ್ದೇನೆ. ನಾವು ಅದರ ಬಗ್ಗೆ ಕೇಳ್ತಿರಲಿಲ್ಲ, ಫಲಿತಾಂಶ ಬಂದ ಬಳಿಕ ನಮಗೆ ಗೊತ್ತಾಗುತ್ತಿತ್ತು ಎಂದು ತಿಳಿಸಿದರು.
ಕುಟುಂಬ ರಾಜಕಾರಣ ಮಾಡದವರು ಯಾರೂ ಇಲ್ಲ: ಯಾರಿಲ್ಲ ಕುಟುಂಬ ರಾಜಕಾರಣ ಮಾಡದವರು ಯಾರೂ ಇಲ್ಲ. ಇಂದಿರಾ ಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನಾಳೆ ಯಾವ ಪಾಪು ಗಾಂಧಿ ಯಾವಾಗ ಬರುತ್ತದೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಅನ್ನು ಟೀಕಿಸಿದರು. ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡುತ್ತದೆ. ಯಡಿಯೂರಪ್ಪ ಹೈಕಮಾಂಡ್ ಅನ್ನು ಒಪ್ಪಿಸಿಕೊಂಡು ಬರುತ್ತಾರೆ. ಸರಿ ತಪ್ಪು ಎಂದು ಚರ್ಚೆ ಮಾಡೋ ಕಾಲ ದೇಶದಲ್ಲಿ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಹೇಳೋರೂ ಇಲ್ಲ ಕೇಳೋರೂ ಯಾರೂ ಇಲ್ಲ. ಇವತ್ತಿನ ಕಾಂಗ್ರೆಸ್ ತಿಹಾರ್ ಜೈಲಿಗೆ ಹೋಗಿ ಬಂದ ಡಿಕೆ ಶಿವಕುಮಾರ್ ಅವರ ಕಾಂಗ್ರೆಸ್. ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದ ನಲಪಾಡ್ ಅವರ ಕಾಂಗ್ರೆಸ್. ನಾನು ಒಕ್ಕಲಿಗ, ನನ್ನ ಸಿಎಂ ಮಾಡಿ ಅನ್ನೋ ಜಾತಿವಾದಿ ಕಾಂಗ್ರೆಸ್ ಈಗ ಉಳಿದಿರುವುದು. ಜಾತಿವಾದಿಗಳಿಂದಲೇ ಕಾಂಗ್ರೆಸ್ ತುಂಬಿ ಹೋಗಿದೆ ಎಂದು ಈಶ್ವರಪ್ಪ ಕಿಡಿ ಕಾರಿದರು.
ಸ್ವಾತಂತ್ರ್ಯಕ್ಕೆ ಹೋರಾಡಿದ ಯಾರೂ ಕಾಂಗ್ರೆಸ್ ನಲ್ಲಿ ಉಳಿದಿಲ್ಲ. ಜಾತಿವಾದಿಗಳು ಸಮಾಜವಾದದ ಬಗ್ಗೆ ಮಾತಾಡ್ತಾರೆ. ಯಾರು ಜಾತಿ ವಾದಿಗಳು ಯಾರು ಕೋಮುವಾದಿಗಳು ಅನ್ನೋದನ್ನು ಜನರೇ ತೀರ್ಮಾನ ಮಾಡ್ತಾರೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರೇ ಸಾಕು ಕಾಂಗ್ರೆಸ್ ನಿರ್ನಾಮವಾಗುತ್ತದೆ. ಸಿದ್ದರಾಮಯ್ಯ ಅವರಿಗೆ ಎಲ್ಲಿ ನಿಂತರೂ ಸೋಲ್ತೀನಿ ಅಂತ ಗೊತ್ತು.
ಪರಮೇಶ್ವರನ್ನು ಸೋಲಿಸಿದ್ದು ನಾನಲ್ಲ ಅಂತ ಸಿದ್ದರಾಮಯ್ಯ ಹೇಳಿಬಿಡಲಿ ನೋಡೋಣ ಎಂದು ಸವಾಲು ಹಾಕಿದರು. ಕೇರಳದ ವಯನಾಡು ರಾಹುಲ್ ಗಾಂಧಿಗೆ, ಕರ್ನಾಟಕದ ಚಾಮರಾಜಪೇಟೆ ಸಿದ್ದರಾಮಯ್ಯಗೆ ಎಂದು ಮಾಜಿ ಸಚಿವ ಈಶ್ವರಪ್ಪ ಟಾಂಗ್ ನೀಡಿದರು.
ಓದಿ : ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ: ಡಿ.ಕೆ. ಶಿವಕುಮಾರ್