ಬೆಂಗಳೂರು : ಬಹು ದಿನಗಳಿಂದ ಉಳಿದಿರುವ ಸಂಪುಟ ವಿಸ್ತರಣೆ ಕುರಿತು ಭಾರಿ ಚರ್ಚೆಯಾಗುತ್ತಿರುವ ನಡುವೆ ಇಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.
ನಗರದ ಖಾಸಗಿ ಹೋಟೆಲ್ವೊಂದರಲ್ಲಿ ಟಿವಿಎಸ್ ಮೋಟರ್ ಕಂಪನಿಯ ಎಲೆಕ್ಟ್ರಿಕ್ ದ್ವಿಚಕ್ರವಾಹನ ಬಿಡುಗಡೆ ಕಾರ್ಯಕ್ರಮದ ಬಳಿಕ ಅದೇ ಹೋಟೆಲ್ನಲ್ಲಿ ನಿತಿನ್ ಗಡ್ಕರಿ ಹಾಗೂ ಯಡಿಯೂರಪ್ಪನವರು ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.
ಈಗಾಗಲೇ ಅಮಿತ್ ಶಾ ಅವರ ಜೊತೆ ಚರ್ಚೆ ನಡೆಸಿರುವ ಸಿಎಂ ಯಡಿಯೂರಪ್ಪನವರು, ಇಂದು ನಿತಿನ್ ಗಡ್ಕರಿ ಜೊತೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿ ಈ ಸಂಬಂಧ ಕೆಲ ಮಾಹಿತಿಗಳನ್ನು ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ವಿಸ್ತರಣೆಗೆ ಕೇಂದ್ರದ ವರಿಷ್ಠರು ಬಹುತೇಕ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ, ಸಂಪುಟಕ್ಕೆ ಎಷ್ಟು ಮಂದಿಯನ್ನು ತೆಗೆದುಕೊಳ್ಳಬೇಕು, ಉಪಚುನಾವಣೆಯಲ್ಲಿ ಗೆದ್ದವರೆಷ್ಟು?, ಮೂಲ ಬಿಜೆಪಿಯವರೆಷ್ಟು? ಎಂಬ ಗೊಂದಲದಲ್ಲಿ ಬಿಎಸ್ವೈ ಇದ್ದು, ಈ ಬಗ್ಗೆಯೂ ನಿತಿನ್ ಗಡ್ಕರಿ ಜೊತೆ ಸಮಾಲೋಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ನಂತರ ಖಾಸಗಿ ಹೋಟೆಲ್ನಿಂದ ಒಂದೇ ಕಾರಿನಲ್ಲಿ ನಿತಿನ್ ಗಡ್ಕರಿ ಹಾಗೂ ಯಡಿಯೂರಪ್ಪ ತೆರಳಿದರು. ವಿದೇಶ ಪ್ರವಾಸದಿಂದ ನಿನ್ನೆಯಷ್ಟೇ ಯಡಿಯೂರಪ್ಪನವರು ನಗರಕ್ಕೆ ಬಂದ ತಕ್ಷಣ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದ್ದರು. ನಿನ್ನೆಯಿಂದ ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಇದರಿಂದ ಬಿಎಸ್ವೈ ಪೇಚಿಗೆ ಸಿಲುಕಿದ್ದಾರೆ ಎನ್ನಲಾಗಿದೆ.