ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ಶಕ್ತಿಕೇಂದ್ರ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರೂ, ತವರು ಜಿಲ್ಲೆ ಮಾತ್ರ ಬಿಸಿ ತುಪ್ಪವಾಗಿದೆ. ಯಾರಿಗೆ ಅವಕಾಶ ಕೊಡಬೇಕು ಅಂತಾ ಹೇಳುವುದು ಎನ್ನುವ ಸಂದಿಗ್ಧ ಸ್ಥಿತಿಯಲ್ಲೇ ಹೆಸರು ಸೂಚಿಸುವಂತಾಗಿದೆ.
ತವರು ಜಿಲ್ಲೆ ಶಿವಮೊಗ್ಗ ವಿಚಾರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿರಿಯ ನಾಯಕ ಈಶ್ವರಪ್ಪಗೆ ಅವಕಾಶ ಸಿಗಲಿದೆಯೋ, ಇಲ್ಲವೋ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ರುದ್ರೇಗೌಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಶಾಸಕ ಆರಗ ಜ್ಞಾನೇಂದ್ರ 1994,1999,2004 ಸತತ ಮೂರು ಬಾರಿ ಗೆದ್ದಿದ್ದರೂ 2008 ರಲ್ಲಿ ಪರಾಜಿತಗೊಂಡರು. ಹಾಗಾಗಿ, ಬಿಜೆಪಿ ಸರ್ಕಾರ ಬಂದರೂ ಸಚಿವರಾಗುವ ಅವಕಾಶದಿಂದ ವಂಚಿತರಾಗಿದ್ದರು. 2013 ರಲ್ಲಿ ಕೆಜೆಪಿ ಪೈಪೋಟಿ ಕಾರಣಕ್ಕೆ ಪರಾಜಿತಗೊಂಡರೂ 2018 ರಲ್ಲಿ ಗೆದ್ದಿದ್ದು ನಾಲ್ಕನೇ ಗೆಲುವಾಗಿದ್ದು, ಹಿರಿಯ ಶಾಸಕ, ಪಕ್ಷ ನಿಷ್ಠೆ, ಪಕ್ಷದ ವಿರುದ್ಧ ಧ್ವನಿ ಎತ್ತದೆ ಕೆಲಸ ಮಾಡಿಕೊಂಡಿದ್ದಾರೆ.
ಹರತಾಳು ಹಾಲಪ್ಪ ಮೂರನೇ ಬಾರಿಗೆ ಕ್ಷೇತ್ರ ಬದಲಿಸಿದ್ದಾರೆ. ಹೊಸನಗರ ಕ್ಷೇತ್ರದ ಶಾಸಕರಾಗಿದ್ದ ಹಾಲಪ್ಪ, ನಂತರ ಸೊರಬ ಕ್ಷೇತ್ರಕ್ಕೆ ವಲಸೆ ಹೋಗಿದ್ದರು. ಈಗ ಕುಮಾರ್ ಬಂಗಾರಪ್ಪಗೆ ಜಾಗ ಕಲ್ಪಿಸಿ ಸಾಗರ ಕ್ಷೇತ್ರಕ್ಕೆ ವಲಸೆ ಹೋಗಿ ಗೆದ್ದು ಶಾಸಕರಾಗಿದ್ದಾರೆ. 2008 ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿದ್ದ ಹಾಲಪ್ಪ ಅತ್ಯಾಚಾರ ಯತ್ನ ಆರೋಪದಿಂದ ರಾಜೀನಾಮೆ ನೀಡಿ ರಾಜಕೀಯ ಅಜ್ಞಾತವಾಸ ಅನುಭವಿಸಿದರು. ನಂತರ ಯಡಿಯೂರಪ್ಪ ಜೊತೆ ಕೆಜೆಪಿ ಕಡೆ ಹೆಜ್ಜೆ ಇಟ್ಟು ಬಿಎಸ್ವೈ ಪರ ನಿಷ್ಠೆ ವ್ಯಕ್ತಪಡಿಸಿದ್ದರು.
ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದಾರೆ. ಬಿಜೆಪಿಯಿಂದ ಶಾಸಕರಾಗಿದ್ದಾರೆ. ಎಸ್.ಎಂ ಕೃಷ್ಣ ಸಂಪುಟದಲ್ಲೇ ಸಚಿವರಾಗಿದ್ದ ಕುಮಾರ್ ಬಂಗಾರಪ್ಪ ಈಗ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ರುದ್ರೇಗೌಡ ಯಡಿಯೂರಪ್ಪ ಅವರ ಅತ್ಯಾಪ್ತ ಶಾಸಕ. ಶಿವಮೊಗ್ಗದ ಉದ್ಯಮಿಯಾಗಿರುವ ರುದ್ರೇಗೌಡ 2013 ರಲ್ಲಿ ಯಡಿಯೂರಪ್ಪ ಒತ್ತಾಯಕ್ಕೆ ಮಣಿದು ಈಶ್ವರಪ್ಪ ವಿರುದ್ಧ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಕೂದಲೆಳೆ ಅಂತರದಲ್ಲಿ ಪರಾಜಿತಗೊಂಡಿದ್ದರು. ಈಶ್ವರಪ್ಪ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ನಂತರ ಯಡಿಯೂರಪ್ಪ ಜೊತೆ ಬಿಜೆಪಿ ಸೇರಿದ ರುದ್ರೇಗೌಡ 2018 ರ ಚುನಾವಣೆಗೆ ಸ್ಪರ್ಧಿಸದೆ ಡಿ.ಎಸ್. ವೀರಯ್ಯ ನಿವೃತ್ತಿಯಿಂದ ತೆರವಾದ ಪರಿಷತ್ ಗೆ ಆಯ್ಕೆಯಾಗಿದ್ದಾರೆ.
ಯಡಿಯೂರಪ್ಪ ಪರ ನಿಷ್ಠೆ ತೋರಿಯೇ ರುದ್ರೇಗೌಡ ರಾಜಕಾರಣಕ್ಕೆ ಬಂದಿದ್ದಾರೆ. ತಮ್ಮ 75 ವರ್ಷದ ಗಡಿ ಕಾರಣಕ್ಕೆ ಈಗ ಅವಕಾಶ ತಪ್ಪಿದರೆ, ಮತ್ತೆ ಸಂಪುಟ ಸೇರುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಹಾಗಾಗಿ ಬೊಮ್ಮಾಯಿ ಸಂಪುಟದಲ್ಲಿಯೇ ಸೇರಬೇಕು ಎನ್ನುವ ಅಪೇಕ್ಷೆ ಹೊಂದಿದ್ದಾರೆ.
ಯಾರಿಗೆ ಮಣೆ: ಶಿವಮೊಗ್ಗದಿಂದ ಕನಿಷ್ಠ ಒಬ್ಬರ ಸಚಿವರಾಗುವುದು ಪಕ್ಕಾ ಆಗಿದ್ದರೂ ಮತ್ತೊಬ್ಬರಿಗೆ ಅವಕಾಶ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ, ಯಾರ ಹೆಸರನ್ನು ಸೂಚಿಸುವುದು ಎನ್ನುವುದೇ ಯಡಿಯೂರಪ್ಪಗೆ ದೊಡ್ಡ ಸವಾಲಾಗಿದೆ. ನಿಷ್ಠ ಬದಲಿಸದೇ ನಾಲ್ಕು ಬಾರಿ ಶಾಸಕರಾಗಿ ಹಿರಿತನ, ಸರಳ ಸಜ್ಜನಿಕೆ ಹೊಂದಿರುವ ಆರಗ ಜ್ಞಾನೇಂದ್ರ, ಶಿಷ್ಯನ ರೀತಿ ಹಿಂಬಾಲಿಸಿಕೊಂಡು ಬಂದಿರುವ ಹಾಲಪ್ಪ, ತನ್ನನ್ನೇ ನಂಬಿ ರಾಜಕೀಯ ಪ್ರವೇಶ ಮಾಡಿರುವ ರುದ್ರೇಗೌಡ ಹೆಸರುಗಳಲ್ಲಿ ಯಾರಿಗೆ ಮಣೆಹಾಕಬೇಕು ಎನ್ನುವುದು ಸಾಕಷ್ಟು ಗೊಂದಲ ಮೂಡಿಸಿದೆ.
ಯಡಿಯೂರಪ್ಪಗೆ ಬಿಸಿ ತುಪ್ಪ: ಕುಮಾರ್ ಬಂಗಾರಪ್ಪ ಹೊರಗಿನಿಂದ ಬಂದ ಕಾರಣಕ್ಕೆ ಈ ಬಾರಿ ಆಧ್ಯತೆ ಸಿಗುವುದು ಕಷ್ಟ. ಆದರೂ, ಈ ಎಲ್ಲ ಆಕಾಂಕ್ಷಿಗಳು ಯಡಿಯೂರಪ್ಪ ಅವರನ್ನೇ ನಂಬಿಕೊಂಡಿದ್ದಾರೆ. ಒಂದಲ್ಲಾ ಒಂದು ರೀತಿಯಲ್ಲಿ ಯಡಿಯೂರಪ್ಪ ರಾಜಕೀಯ ಜೀವನದಲ್ಲಿ ಸಾಗಿಕೊಂಡು ಬಂದಿದ್ದಾರೆ. ಹಾಗಾಗಿ, ಇವರಲ್ಲಿ ಯಾರ ಹೆಸರು ಸೂಚಿಸಬೇಕು ಎನ್ನುವುದೇ ಯಡಿಯೂರಪ್ಪಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಅನಾಯಾಸವಾಗಿ ಸಂಪುಟದಲ್ಲಿ ಅವಕಾಶ : ಒಟ್ಟಿನಲ್ಲಿ ಅಳೆದು ತೂಗಿ ಯಡಿಯೂರಪ್ಪ ಜಿಲ್ಲೆಯಿಂದ ಎರಡು ಹೆಸರು ಸೂಚಿಸಿದ್ದಾರೆ ಎನ್ನಲಾಗಿದೆ. ಈಶ್ವರಪ್ಪರಿಗೆ ಅವಕಾಶ ನೀಡದೇ ಇದ್ದಲ್ಲಿ ಯಡಿಯೂರಪ್ಪ ಸೂಚಿಸಿದ ಇಬ್ಬರಿಗೆ ಅನಾಯಾಸವಾಗಿ ಸಂಪುಟದಲ್ಲಿ ಅವಕಾಶ ಸಿಗಲಿದೆ. ಆದರೆ, ಈಶ್ವರಪ್ಪ ಸಂಪುಟಕ್ಕೆ ಎಂಟ್ರಿ ಕೊಟ್ಟಲ್ಲಿ, ಉಳಿದ ಮೂವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
ಓದಿ: ಜೂಜು ದಂಧೆ: ನಟಿ ನೇಹಾಶೆಟ್ಟಿ ತಂದೆ ಸೇರಿ 42 ಮಂದಿ ವಿರುದ್ಧ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಕೆ