ಬೆಂಗಳೂರು: ಸಿಎಂ ಆದ ಬಳಿಕ ಮೊದಲ ಬಾರಿ ಬೆಂಗಳೂರಿನ ಸ್ಥಿತಿಗತಿಗಳನ್ನು ಅರಿಯಲು ಅಧಿಕಾರಿಗಳ ಜೊತೆ ನಗರದ ಬೇರೆ ಬೇರೆ ಭಾಗಗಳಿಗೆ ತೆರಳಿ ಸಮಸ್ಯೆಗಳ ಪರಿಶೀಲನೆ ಮಾಡಲಾಗಿದೆ. ಸಾಧ್ಯವಾದರೆ 15 ದಿನಕ್ಕೊಮ್ಮೆ ಬೆಂಗಳೂರು ನಗರ ಪರಿವೀಕ್ಷಣೆ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರ ಪರಿವೀಕ್ಷಣೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಾರ್ವಜನಿಕರ ಅಭಿಪ್ರಾಯವನ್ನು ಕೇಳುವ ಪ್ರಯತ್ನ ಮಾಡಿದ್ದೇನೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಭಾನುವಾರದಂದು ಪರಿವೀಕ್ಷಣೆಗೆ ದಿನ ಆಯ್ಕೆ ಮಾಡಿಕೊಂಡಿದ್ದೆ ಎಂದರು.
ಬನ್ನೇರುಘಟ್ಟ ರಸ್ತೆ, ಕಾಡು ಬೀಸನಹಳ್ಳಿ, ಟಿನ್ ಫ್ಯಾಕ್ಟರಿ ಕಡೆ ವೀಕ್ಷಣೆ ನಡೆಸಲಾಗಿದೆ. ಬನ್ನೇರುಘಟ್ಟ ಮೆಟ್ರೋ, ಮೇಲ್ಸೇತುವೆ ಪರಿಶೀಲನೆ ಮಾಡಲಾಗಿದ್ದು, 2021ರೊಳಗಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮೆಟ್ರೋ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇನ್ನು ಮೆಟ್ರೋ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಕಾಮಗಾರಿ ವೇಗ ಹೆಚ್ಚಿಸುವಂತೆ ತಾಕೀತು ಮಾಡಿದ್ದೇನೆ ಎಂದರು.
ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡುವ ಉದ್ದೇಶವಿದ್ದು, ಹೆಬ್ಬಾಳ ಮೇಲ್ಸೇತುವೆಗೆ 5 ಲೇನ್ಗಳ ಅಳವಡಿಕೆ ಕುರಿತು ವರದಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ. ಕೆ.ಆರ್.ಪುರಂ, ಸಿಲ್ಕ್ ಬೋರ್ಡ್ನಲ್ಲಿ ಟ್ರಾಫಿಕ್ ಜಾಮ್ನಿಂದ ಹಲವು ಕಂಪನಿಗಳಿಗೆ ನಷ್ಟ ಆಗುತ್ತಿದೆ ಎಂಬ ದೂರುಗಳು ಬಂದಿವೆ. ಹೀಗಾಗಿ ಆದಷ್ಟು ಬೇಗ ಮೆಟ್ರೋ ಕಾಮಗಾರಿ ಪೂರ್ಣಗೊಳಿಸುವ ಕಡೆ ಗಮನ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಕಸ ವಿಲೇವಾರಿ ಕುರಿತು ಮಾತನಾಡಿದ ಅವರು, ತ್ಯಾಜ್ಯದಿಂದ ಜನರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಬೇರೆ ರಾಜ್ಯಗಳಲ್ಲಿ ಯಾವ ರೀತಿ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂದು ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರ ಸಹಿಸಲ್ಲ:
ಭ್ರಷ್ಟಾಚಾರದ ಕುರಿತು ಸಾರ್ವಜನಿಕರು ನನ್ನ ಗಮನಕ್ಕೆ ತಂದರೆ ಮುಲಾಜಿಲ್ಲದೇ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರ ಮಾಡಿದರೆ ಸಹಿಸಲ್ಲ. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 200 ಕೋಟಿ ರೂ. ಬಿಡುಗಡೆಗೆ ಸೂಚಿಲಾಗಿದ್ದು, ಇದರ ಹೆಸರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ನೆರೆ ಪರಿಸ್ಥಿತಿ ವೀಕ್ಷಣೆ:
ನೆರೆ ಪೀಡಿತ ಪ್ರದೇಶವಾದ ಕಾರವಾರಕ್ಕೆ ಶೀಘ್ರದಲ್ಲೇ ಭೇಟಿ ನೀಡಲಿದ್ದೇನೆ. ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದರು.