ಬೆಂಗಳೂರು: ಯಾವುದೇ ಅರ್ಜಿ ಇರಲಿ ಅಹವಾಲು ಇರಲಿ ಸ್ವೀಕರಿಸಿ ಈಡೇರುವ ಭರವಸೆ ನೀಡುತ್ತಿದ್ದ, ಪರಿಗಣಿಸಿ ಪರಿಶೀಲಿಸುವ ಆಶ್ವಾಸನೆ ನೀಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಮೇಯರ್ ಅಭ್ಯರ್ಥಿ ವಿಚಾರದಲ್ಲಿ ಯಾವುದೇ ಭರವಸೆ ನೀಡದೆ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ.
ಒಕ್ಕಲಿಗ ಸಮುದಾಯದ ನಿಯೋಗ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದ್ದು, ಕಳೆದ 17 ವರ್ಷಗಳಿಂದ ನಮ್ಮ ಸಮುದಾಯಕ್ಕೆ ಬಿಬಿಎಂಪಿ ಮೇಯರ್ ಸ್ಥಾನ ಸಿಕ್ಕಿಲ್ಲ. ಬೆಂಗಳೂರು ನಿರ್ಮಾಣಕ್ಕೆ ಒಕ್ಕಲಿಗ ಸಮುದಾಯದ ಪಾತ್ರ ದೊಡ್ಡದಿದೆ ಹಾಗಾಗಿ ನಮ್ಮ ಸಮುದಾಯಕ್ಕೆ ಅವಕಾಶ ನೀಡಿ ಎಂದು ಸಿಎಂಗೆ ಒಕ್ಕಲಿಗ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಿಎಂ ಸ್ಪಷ್ಟವಾದ ಯಾವುದೇ ಭರವಸೆಯನ್ನಾಗಲಿ ಆಶ್ವಾಸನೆಯನ್ನಾಗಲಿ ನೀಡಲಿಲ್ಲ, ಇದರಿಂದ ಅಸಮಧಾನಗೊಂಡ ಒಕ್ಕಲಿಗ ನಿಯೋಗದ ನಾಯಕರು ಸಿಎಂ ಮೇಲೆ ಒತ್ತಡ ಹೇರಲು ಮುಂದಾದರು. ಆದರೆ ಇದಕ್ಕೆ ಸೊಪ್ಪುಹಾಕದ ಸಿಎಂ, ನೋಡಿ ನನಗೆ ಒಕ್ಕಲಿಗರು, ಬ್ರಾಹ್ಮಣರು ಅಂತಾ ಏನಿಲ್ಲ ಎಲ್ಲರೂ ಸೇರಿ ಏನು ತೀರ್ಮಾನ ಕೈಗೊಳ್ಳುತ್ತಾರೋ ಅದೇ ಅಂತಿಮವಾಗಲಿದೆ. ಮೇಯರ್ ಅಭ್ಯರ್ಥಿ ಆಯ್ಕೆ ವಿಚಾರವನ್ನು ಪಕ್ಷದ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ, ನಮಗೆ ಬಂದ ಮನವಿಯನ್ನು ರಾಜ್ಯಾಧ್ಯಕ್ಷರಿಗೆ ಕಳುಹಿಸಿಕೊಡುತ್ತೇವೆ, ನಳಿನ್ ಕುಮಾರ್ ಕಟೀಲ್ ಹಾಗು ಪಕ್ಷ ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲಿದೆಯೆಂದರು.
ಇಷ್ಟಕ್ಕೂ ಸುಮ್ಮನಾಗದ ನಿಯೋಗ ಪುನಃ ಅದೇ ಪ್ರಶ್ನೆ ಕೇಳಿದ್ದಕ್ಕೆ ಸಿಡಿಮಿಡಿಗೊಂಡ ಸಿಎಂ ಅಧ್ಯಕ್ಷರನ್ನು ಭೇಟಿ ಮಾಡಿ ಎನ್ನುತ್ತಾ, ಒಕ್ಕಲಿಗ ಸಮುದಾಯದವರ ಯಾವ ಮಾತನ್ನೂ ಕೇಳದೆ ಮುನ್ನಡೆದರು. ಇವನ್ನೆಲ್ಲಾ ಗಮನಿಸಿದರೆ, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ, ರಾಜ್ಯಾಧ್ಯಕ್ಷ ಹುದ್ದೆ ತೊರೆದ ನಂತರ ಪಕ್ಷದಲ್ಲಿ ಬಿಎಸ್ವೈ ಪ್ರಭಾವ ತಗ್ಗಿಸಲು ಯತ್ನ ನಡೆದಿರುವುದು ಸ್ಪಷ್ಟವಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.