ಬೆಂಗಳೂರು: ಬೆಂಗಳೂರು ವಿವಿಯ ಆಡಳಿತ ಮಂಡಳಿಯ ಬೇಜವಾಬ್ದಾರಿ ವಿದ್ಯಾರ್ಥಿಗಳ ಭವಿಷ್ಯವನ್ನು ಕಿತ್ತುಕೊಳ್ಳುತ್ತಿದೆ ಎಂದು ಎಸ್ಎಫ್ಐ ಆರೋಪಿಸಿದೆ.
ಬೆಂಗಳೂರು ವಿವಿ ಯ ವ್ಯಾಪ್ತಿಯಲ್ಲಿ ಬರುವ BSW ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪನ ಆಗಿ 25 ದಿನಗಳು ಕಳೆದರು ಇನ್ನೂ ಫಲಿತಾಂಶ ಪ್ರಕಟಿಸಿಲ್ಲ. ತಮ್ಮ ಉನ್ನತ ಶಿಕ್ಷಣಕ್ಕಾಗಿ ಫಲಿತಾಂಶ ಪ್ರಕಟಣೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ತಾವು ಓದಬೇಕಿರುವ MSW ನ ಪ್ರಥಮ ವರ್ಷದ ದಾಖಲಾತಿಯ ಕೊನೆಯ ದಿನಾಂಕ ಮುಕ್ತಾಯಗೊಂಡಿದೆ. ಒಂದು ವೇಳೆ ಇನ್ನೂ 3-4 ದಿನದಲ್ಲಿ ಫಲಿತಾಂಶ ಬಂದರೆ ದಂಡದ ಮೊತ್ತದೊಂದಿಗೆ ದಾಖಲಾತಿಯನ್ನು ಮಾಡಿಸಬೇಕಾಗುತ್ತೆ ಇಲ್ಲವಾದರೆ ಇಲ್ಲವೆಂದು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳು ದಂಡ ಕಟ್ಟುವುದು ಎಷ್ಟು ಸರಿ?
ಬೆಂಗಳೂರು ವಿವಿಯ ನಿರ್ಲಕ್ಷ್ಯದಿಂದ ಸಮಾಜ ಕಲ್ಯಾಣ ಇಲಾಖೆ ನೀಡುವ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಸಹ ಕೊನೆಗೊಂಡಿದೆ. ಇದರಿಂದ ನೂರಾರು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಆತಂಕ ಎದುರಾಗಿದೆ. ವಿವಿಯಿಂದ ತಮಗಾಗಿರುವ ಸಮಸ್ಯೆಗಳನ್ನು ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಎಸ್ಎಫ್ಐ (SFI) ನಿಯೋಗ ಭೇಟಿ ನೀಡಿ ಪರೀಕ್ಷಾ ಕುಲಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಇದರ ಫಲವಾಗಿ ಈ ಕೂಡಲೇ ಫಲಿತಾಂಶ ಪ್ರಕಟಿಸಿ, ಸ್ನಾತಕೋತ್ತರ, ಪದವಿ ದಾಖಲಾತಿ ಅವಧಿಯನ್ನು ಮುಂದೂಡಲಾಗುವುದು ಎಂದು ಕುಲಸಚಿವರು ತಿಳಿಸಿದ್ದಾರೆ. ಇದೇ ವೇಳೆ ಫಲಿತಾಂಶ ಪ್ರಕಟಣೆಯಲ್ಲಿ ತಡವಾಗಿರುವ ಕಾರಣ ವಿದ್ಯಾರ್ಥಿ ವೇತನಕ್ಕೆ ಅಥವಾ MSW ನ ದಾಖಲಾತಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಆಗದ ಹಾಗೆ ಇಲಾಖೆಯ ಜೊತೆ ಮಾತನಾಡಬೇಕೆಂದು ಎಸ್ಎಫ್ಐ ಒತ್ತಾಯಿಸಿದೆ.