ಬೆಂಗಳೂರು : ನೀವು ಹೇಳಿದವರಿಗೆ ಟಿಕೆಟ್ ಕೊಡುತ್ತೇವೆ, ನಿಮ್ಮನ್ನು ಕೇಂದ್ರ ಸಚಿವರನ್ನಾಗಿ ಮಾಡುತ್ತೇವೆ ಎಂದರೂ ಕೇಳದೆ ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿ ಎಲ್ಲವನ್ನೂ ಅನುಭವಿಸಿ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಸರ್ಕಾರ ಬಂದ ನಂತರ ಸಚಿವ ಸ್ಥಾನ ನೀಡುವುದಾಗಿ ತಿಳಿಸಿದರೂ ಸವದಿ ಕಾಂಗ್ರೆಸ್ಗೆ ಹೋಗಿದ್ದಾರೆ. ಈ ಇಬ್ಬರು ನಾಯಕರಿಗೆ ನಾವೇನು ಕಡಿಮೆ ಮಾಡಿದ್ದೆವು. ಪಕ್ಷಕ್ಕೆ ಇವರು ದ್ರೋಹ ಮಾಡಿದ್ದಾರೆ, ನಾನಿನ್ನೂ ಗಟ್ಟಿಯಾಗಿದ್ದೇನೆ, ರಾಜ್ಯ ಪ್ರವಾಸ ಮಾಡಿ ಇವರ ಬಂಡವಾಳ ಬಯಲು ಮಾಡುತ್ತೇನೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇವೆ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಹೇಳಿದರು.
ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷ, ಹಳೆ ಬೇರು ಹೊಸ ಚಿಗುರು ಸೇರಿ ದೊಡ್ಡ ಪಕ್ಷವನ್ನಾಗಿ ಬೆಳೆಸಬೇಕಿದೆ. ಬಿಜೆಪಿ ನನಗೆ, ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ, ಕೆ.ಎಸ್ ಈಶ್ವರಪ್ಪಗೆ ಸರಿಯಾದ ಸ್ಥಾನಮಾನದೊಂದಿಗೆ ಅನೇಕ ಅವಕಾಶ ಕೊಟ್ಟಿದೆ. ನನ್ನಂತ ಸಾಮಾನ್ಯ ಕಾರ್ಯಕರ್ತ ಎಲ್ಲಿ ಹೋದರೂ ಇಷ್ಟೊಂದು ಜನರ ಪ್ರೀತಿ ವಿಶ್ವಾಸ ಸಿಗಲು ಕಾರಣ ಬಿಜೆಪಿ ಎನ್ನುವುದನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಸವದಿಯನ್ನು ಬಿಜೆಪಿಗೆ ಕರೆತಂದು ಶಾಸಕ, ಮಂತ್ರಿ ಮಾಡಿದೆವು. ಕಳೆದ ಬಾರಿ ಸೋತಾಗಲೂ ಎಂಎಲ್ಸಿ ಮಾಡಿ, ಡಿಸಿಎಂ ಸ್ಥಾನ ನೀಡಲಾಯಿತು. ಕೋರ್ ಕಮಿಟಿ ಸದಸ್ಯ ಸ್ಥಾನ ನೀಡಿ ಎಲ್ಲ ಸ್ಥಾನ ನೀಡಲಾಗಿದೆ ಎಂದರು.
"ನಾವೇನು ಅವರಿಗೆ ಕಡಿಮೆ ಮಾಡಿದ್ದೆವು, ಅವರು ಪರಿಷತ್ ಸದಸ್ಯರಾಗಿ ಕೇವಲ 10 ತಿಂಗಳಾಗಿದೆ. ಇನ್ನು 5.2 ವರ್ಷ ಅವಧಿ ಇದೆ. ಈ ಹಿಂದೆ ಸಚಿವರನ್ನಾಗಿ ಮಾಡಿದಂತೆ ಈಗ ನಮ್ಮ ಸರ್ಕಾರ ಬಂದ ನಂತರ ಮತ್ತೆ ಮಾಡಲು ಯಾವುದೇ ತೊಡಕಿರಲಿಲ್ಲ, ನಿಮಗೆ ಏನು ಅನ್ಯಾಯ ಆಗಿತ್ತು?. ಎಲ್ಲಾ ಸವಲತ್ತು, ಸ್ಥಾನಮಾನ ಪಡೆದು ಕಾಂಗ್ರೆಸ್ಗೆ ಹೋದಿರಿ. ಇದು ನಂಬಿಕೆ ದ್ರೋಹ, ವಿಶ್ವಾಸ ದ್ರೋಹ, ಜನರಿಗೆ ಮಾಡಿದ ದ್ರೋಹ, ಜನ ಅವರನ್ನು ಕ್ಷಮಿಸಲ್ಲ" ಎಂದು ಯಡಿಯೂರಪ್ಪ ಹೇಳಿದರು.
ಜಗದೀಶ್ ಶೆಟ್ಟರ್ ಜನಸಂಘದ ಕಾಲದಿಂದ ಬಿಜೆಪಿ ಕುಟುಂಬದಲ್ಲಿದ್ದಾರೆ. ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ, ಸಚಿವ, ಮುಖ್ಯಮಂತ್ರಿ ಮಾಡಲಾಗಿತ್ತು. ಬಿಬಿ ಶಿವಪ್ಪ ಅವರನ್ನು ಎದುರು ಹಾಕಿಕೊಂಡು ಶೆಟ್ಟರ್ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಮಾಡಿದೆವು. ನಾನು, ಅನಂತ್ ಕುಮಾರ್ ಅವರ ಬೆನ್ನಿಗೆ ನಿಂತೆವು. ನಾನೇ ಮುಖ್ಯಮಂತ್ರಿ ಮಾಡಿದೆ. ಇಷ್ಟೆಲ್ಲಾ ಅವಕಾಶ ನೀಡಿದ್ದರೂ ಈಗ ಹೊರಹೋಗಿದ್ದಾರೆ. ಮೋದಿ ಜೊತೆ ಹೆಜ್ಜೆ ಹಾಕುವುದು ನಮ್ಮೆಲ್ಲರ ಜವಾಬ್ದಾರಿ ಆಗಿತ್ತು. ದೇಶ ಮಾತ್ರವಲ್ಲ, ಪ್ರಪಂಚದೆಲ್ಲೆಡೆ ಯಾವ ಸ್ಥಾನಮಾನ ಮೋದಿಗಿದೆ ಎನ್ನುವುದು ಗೊತ್ತು. ಇಂತಹ ಸಂದರ್ಭದಲ್ಲಿ ಶೆಟ್ಟರ್ ನಿರ್ಧಾರ ಅವರು ನಂಬಿಕೊಂಡ ನಿಲುವಿಗೆ ವಿರುದ್ಧವಾಗಿದೆ. ಅವಕಾಶ ಸಿಗಲಿ, ಬಿಡಲಿ ದೇಶಕ್ಕಾಗಿ ಕೆಲಸ ಮಾಡಬೇಕು ಎಂದು ಬಿಎಸ್ವೈ ಹೇಳಿದರು.
ಬೇರೆ ನಿರ್ಧಾರ ಕೈಗೊಳ್ಳಬೇಡಿ ಎಂದು ನಮ್ಮೆಲ್ಲಾ ನಾಯಕರು ಮಾತನಾಡಿದರು. ಕೇಂದ್ರದ ಸಚಿವ ಸ್ಥಾನ ನೀಡುವುದಾಗಿ ಹೇಳಿದರೂ ಕಾಂಗ್ರೆಸ್ ಜೊತೆ ಕೈ ಜೋಡಿಸಲು ಹೊರಟಿರುವುದು ಅಕ್ಷಮ್ಯ. ನಾಡಿನ ಜನ ಇದನ್ನು ಕ್ಷಮಿಸಲ್ಲ. ನಿಮಗೆ ನಾವೇನು ಕಡಿಮೆ ಮಾಡಿದ್ದೇವೆ. ಎಲ್ಲ ಸ್ಥಾನಮಾನ ಕೊಟ್ಟಿದ್ದೇವೆ ಆದರೂ ನಿಮ್ಮ ಈ ನಿರ್ಧಾರ ಪಕ್ಷಕ್ಕೆ ಮಾಡಿದ ದ್ರೋಹ ಇದನ್ನು ಯಾರೂ ಕ್ಷಮಿಸಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನನಗೆ 80 ವರ್ಷವಾದರೂ ನಾನು ಓಡಾಡುತ್ತಿರುವುದು ದೇಶದಲ್ಲಿ ಬಲಿಷ್ಠ ಸರ್ಕಾರವಿದ್ದು, ರಾಜ್ಯದಲ್ಲಿ ಜನಪರ ಸರ್ಕಾರ ರಚಿಸಲು. ನನ್ನ ಸಂಪೂರ್ಣ ಸಮಯ ಇದಕ್ಕಾಗಿ ತೆಗೆದಿಟ್ಟಿದ್ದೇನೆ. ಜಗತ್ತಿನ ಯಾವುದೇ ಶಕ್ತಿ ಕೂಡ ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದರು.
ಇದನ್ನೂ ಓದಿ : 'ನಮ್ಮ ಮನೆಯಿಂದಲೇ ನಮ್ಮನ್ನು ಹೊರಹಾಕಿದಂತಾಯಿತು'.. ರಾಜೀನಾಮೆ ಬಳಿಕ ಶೆಟ್ಟರ್ ಹೀಗಂದ್ರು
ಹೊಸ ಮುಖಕ್ಕೆ ಅವಕಾಶ ನೀಡಲು ಈ ಬಾರಿ ಹೊಸ ಪ್ರಯೋಗ ಮಾಡಲಾಗಿದೆ. ಎಲ್ಲಾ ಜಾತಿಗೆ ಅವಕಾಶ ನೀಡಿ, ಎಲ್ಲ ಸಮುದಾಯ ಒಟ್ಟಾಗಿ ಕರೆದುಕೊಂಡು ಹೋಗಿತ್ತಿದ್ದೇವೆ. ಹೊಸತನ, ಹೊಸ ಹುರುಪು, ಹೊಸ ರಕ್ತಕ್ಕೆ ಅವಕಾಶ ಕೊಡಬೇಕು ಅದಕ್ಕಾಗಿ ನಾವು ಹಿರಿಯರು ಬಿಜೆಪಿ ಋಣ ತೀರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದ ನಂತರ ಆಡಳಿತ ನಡೆಸಿದ ಪಕ್ಷಗಳು ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಕ್ಕೆ ಏನು ಮಾಡಿದವು?. ಬರಿ ಮತಬ್ಯಾಂಕ್ ಮಾಡಿಕೊಂಡವು. ಆದರೆ, ನಾವು ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಕೊಟ್ಟಿದ್ದೇವೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿದ್ದೇವೆ, ಸಾಮಾಜಿಕ ನ್ಯಾಯ ಪಾಲಿಸುವಲ್ಲಿ ಪಕ್ಷ ಎಂದೂ ಹಿಂದೆ ಬಿದ್ದಿಲ್ಲ, ಮೀಸಲಾತಿಯಲ್ಲಿ ಯಾರಿಗೂ ಅನ್ಯಾಯ ಆಗದಂತೆ ಮೀಸಲು ಪ್ರಮಾಣ ಹಂಚಿಕೆ ಮಾಡಿದ್ದೇವೆ ಎಂದರು.
ಮುಖ್ಯಮಂತ್ರಿ ಮಾಡಿದ್ದರೂ ಈಗ ಶೆಟ್ಟರ್ ಹೊರ ಹೋಗಿದ್ದಾರೆ. ಪ್ರಸ್ತುತ ಪಕ್ಷದ ಉಪಾಧ್ಯಕ್ಷರಾಗಿದ್ದರೂ ಅದನ್ನು ತಿರಸ್ಕರಿಸಿ ಸವದಿ ಕಾಂಗ್ರೆಸ್ಗೆ ಹೋಗಿದ್ದಾರೆ. ಇದರ ನಡುವೆ, ರಘುಪತಿ ಭಟ್, ಅಂಗಾರ, ಈಶ್ವರಪ್ಪ ಪಕ್ಷದ ನಿಲುವು ಸ್ವಾಗತಿಸಿದ್ದಾರೆ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ, ನಾನು ನಾಲ್ಕು ಬಾರಿ ಸಿಎಂ ಆಗಿದ್ದೇನೆ. ಸ್ವ ಇಚ್ಚೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ, ಯುವ ನಾಯಕತ್ವಕ್ಕೆ ಅವಕಾಶ ನೀಡಲು ಇದು ಅನಿವಾರ್ಯ ಎಂದು ಹೈಕಮಾಂಡ್ ನಡೆಯನ್ನು ಸಮರ್ಥಿಸಿಕೊಂಡರು.
ಮೋದಿ, ಅಮಿತ್ ಶಾ, ಪ್ರಧಾನ್ ಎಲ್ಲರ ಸಲಹೆ ಸಹಕಾರ ಪಡೆದು ನಾನು ಇಂದು ಹೇಳುತ್ತೇನೆ, ಲೋಕಸಭೆಯಲ್ಲಿ ಈ ಹಿಂದೆ ಹೇಳಿದಂತೆ 25 ಸ್ಥಾನ ಗೆದ್ದೆವು, ಮುಂದೆಯೂ 25 ಸ್ಥಾನ ಗೆಲ್ಲುತ್ತೇವೆ, ಈ ವಿಧಾನಸಭಾ ಚುನಾವಣೆಯಲ್ಲಿ ನಾವೆಲ್ಲಾ ಪ್ರವಾಸ ಮಾಡಲಿದ್ದೇವೆ. ಯಾವ ಶಕ್ತಿ ಕೂಡ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ, ರಾಜ್ಯದಲ್ಲಿ ಸ್ಪಷ್ಟ ಬಹುಮತದಿಂದ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದರು.
ನಾನು ಹಿಂದೆ ಕೆಜೆಪಿ ಕಟ್ಟಿದ್ದಕ್ಕೆ ಜನತೆಯ ಕ್ಷಮಾಪಣೆ ಕೇಳಿದ್ದೇನೆ ಅದು ಅಕ್ಷಮ್ಯ, ಬಿಜೆಪಿ ಕಾರ್ಯಕರ್ತರಿಗೆ ನಾನು ಕೈಜೋಡಿಸಿ ಮನವಿ ಮಾಡುತ್ತೇನೆ, ಎಲ್ಲ ಅನುಭವಿಸಿ ಈಗ ಟಿಕೆಟ್ ಸಿಗದೆ ಪಕ್ಷ ತೊರೆಯುತ್ತಿರುವುದರಿಂದ ವಿಚಲಿತರಾಗದೆ ಪಕ್ಷ ಬಲಪಡಿಸಿ. ಯಾರೇ ಅಭ್ಯರ್ಥಿ ಆದರೂ ಗೆಲ್ಲಿಸಿ ಎಂದು ಯಡಿಯೂರಪ್ಪ ಮನವಿ ಮಾಡಿದರು.
ಇದನ್ನೂ ಓದಿ : ಬಿಜೆಪಿ ತೊರೆದ ಸೋಲಿಲ್ಲದ ಸರದಾರ: ಜಗದೀಶ್ ಶೆಟ್ಟರ್ ನಡೆದು ಬಂದ ಹಾದಿಯ ಹಿನ್ನೋಟ..
ಶೆಟ್ಟರ್ ಸವದಿ ಪಕ್ಷ ತೊರೆದಿದ್ದರಿಂದ ಯಾವುದೇ ರೀತಿಯ ಸಮಸ್ಯೆ ಆಗಲ್ಲ, ಸವದಿಗೆ ಏನು ಕಡಿಮೆ ಮಾಡಿದ್ದವು, ಸಚಿವ ಸ್ಥಾನ ಕೊಡುವ ಭರವಸೆ ನೀಡಿದ್ದೆವು, ಶೆಟ್ಟರ್ಗೂ ಸಿಎಂ ಮಾಡಿದ್ದೆವು, ನಿಮ್ಮ ಮನೆಯವರಿಗೆ ನಿಲ್ಲಿಸಿ, ರಾಜ್ಯಸಭೆ ಮೂಲಕ ಕೇಂದ್ರ ಮಂತ್ರಿ ಮಾಡುವುದಾಗಿ ಹೇಳಿದ್ದೇವೆ. ಆದರೂ ಹೋಗಿದ್ದಾರೆ. ನಾನಿನ್ನೂ ಗಟ್ಟಿಯಾಗಿದ್ದೇನೆ, ನಾಮಪತ್ರ ಪರಿಶೀಲನೆ ಕಾರ್ಯದ ನಂತರ ಒಂದು ದಿನವೂ ಮನೆ ಸೇರದೆ ರಾಜ್ಯದ ಉದ್ದಗಲಕ್ಕೆ ಹೋಗಿ ಇವರೆಲ್ಲರ ಬಣ್ಣ ಬಯಲು ಮಾಡುತ್ತೇನೆ, ಸ್ಪಷ್ಟ ಬಹುಮತದಿಂದ ಸರ್ಕಾರ ತರುತ್ತೇವೆ ಎಂದರು.
ಹಿಂದೆ ವೀರಶೈವ ಧರ್ಮ ವಿಭಜನೆ ಮಾಡಲು ಹೊರಟಿದ್ದರು. ಈಗ ಬಿಜೆಪಿ ವೀರಶೈವ ವಿರೋಧಿ ಎನ್ನುವ ಅಪಪ್ರಚಾರಕ್ಕೆ ಕಾಂಗ್ರೆಸ್ ಮುಂದಾಗಿದೆ. ಆದರೆ ವೀರಶೈವರಿಗೆ ಅನ್ಯಾಯವಾಗಿದೆ ಎನ್ನುವ ಕಾಂಗ್ರೆಸ್ ಆರೋಪ ನಿರಾಧಾರ, ನಮ್ಮ ಸಮುದಾಯಕ್ಕೆ ಎಲ್ಲ ಸ್ಥಾನಮಾನ ನೀಡಿದೆ. ನಾನು ಗಟ್ಟಿ ಇದ್ದೇನೆ, ಓಡಾಡುತ್ತೇನೆ 120-130 ಸ್ಥಾನ ಗಳಿಸಿ ಸ್ವತಂತ್ರ ಅಧಿಕಾರ ತರಲಿದ್ದೇವೆ ಎಂದರು.
ನಮಗೆ ಹೈಕಮಾಂಡ್ ಸುಪ್ರೀಂ, ಮತ್ತೊಮ್ಮೆ ಅವಕಾಶ ಕೊಡಲ್ಲ ಎಂದಿದ್ದೆವಾ? ನಿವೃತ್ತಿ ಆಗಿ ಎಂದು ಶೆಟ್ಟರ್ಗೆ ಯಾರೂ ಹೇಳಿಲ್ಲ, ಕೇಂದ್ರಕ್ಕೆ ಬನ್ನಿ ಎಂದಿದ್ದೇವೆ ಅಷ್ಟೇ. ಶೆಟ್ಟರ್ಗೆ ನಾವು ಅನ್ಯಾಯ ಮಾಡಿಲ್ಲ, ಅವರು ಈಗಾಗಲೇ ಕಾಂಗ್ರೆಸ್ ಗೆ ಹೋಗಲು ತೀರ್ಮಾನಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ಮತ್ತೆ ಅವರ ಬಗ್ಗೆ ಮಾತನಾಡಲ್ಲ. ಆದರೂ ತಪ್ಪು ಅರ್ಥ ಮಾಡುಕೊಂಡು ಯಾರೇ ವಾಪಸ್ ಬಂದರೂ ಅವರನ್ನು ಸ್ವಾಗತಿಸಿ ಹಳೆಯ ಸ್ಥಾನಮಾನವನ್ನೇ ನೀಡಲಿದ್ದೇವೆ ಎಂದು ಬಿಎಸ್ವೈ ಭರವಸೆ ನೀಡಿದರು.