ಬೆಂಗಳೂರು: ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳಿಲ್ಲ. ನನ್ನನ್ನು ಪಕ್ಷ ನಿರ್ಲಕ್ಷ್ಯ ಮಾಡುತ್ತಲೂ ಇಲ್ಲ, ನಾವೆಲ್ಲಾ ಒಟ್ಟಾಗಿದ್ದೇವೆ, ಯಾರು ಯಾರನ್ನು ಮುಗಿಸಲು ಸಾಧ್ಯವಿಲ್ಲ. ನನಗೆ ನನ್ನದೇ ಆದ ಶಕ್ತಿ ಇದೆ. ನಾನು ಪಕ್ಷ ಕಟ್ಟಿ ಬೆಳೆಸಿದ್ದೇನೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳಕ್ಕೆ ತೆರಳುವ ಮುನ್ನ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಕೊಪ್ಪಳಕ್ಕೆ ಬರುತ್ತಿದ್ದಾರೆ. ಆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಬೇರೆ ಕಾರಣಕ್ಕೆ ನಾನು ಇವತ್ತು ಕಾರ್ಯಕ್ರಮಕ್ಕೆ ಹೋಗದೇ ಇರೋ ಸ್ಥಿತಿ ಇತ್ತು. ಆದರೆ ಹೋಗಲೇಬೇಕು ಅನ್ನೋ ಸ್ಥಿತಿ ಬಂತು. ಹೀಗಾಗಿ ತೆರಳುತ್ತಿದ್ದೇನೆ. ಸಿಎಂ ಕೂಡಾ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಇಬ್ಬರು ಒಟ್ಟಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಗೊಂದಲಗಳು ಇಲ್ಲ. ಮಾಧ್ಯಮ ಸ್ನೇಹಿತರು ಯಾವುದನ್ನು ಸೃಷ್ಟಿ ಮಾಡಲು ಹೋಗಬೇಡಿ. ನಾವೆಲ್ಲ ಒಟ್ಟಾಗಿ ಇದ್ದೇವೆ. ಒಂದಾಗಿ ಇದ್ದೇವೆ ಎಂದರು.
ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಒಂದೇ ಅಜೆಂಡಾ.. ನಮ್ಮದು ಒಂದೇ ಅಜೆಂಡಾ, ಮುಂದೆ ಚುನಾವಣೆ ಇದೆ. ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವುದೇ ನಮ್ಮ ಮುಂದಿರುವ ಏಕೈಕ ಗುರಿ. ಅದಕ್ಕೆ ಬೇಕಾದ ಎಲ್ಲಾ ಶ್ರಮ ಹಾಕುತ್ತೇನೆ. ರಾಜ್ಯದ ಉದ್ದಗಲಕ್ಕೂ ಓಡಾಡುತ್ತೇನೆ. ಬಿಜೆಪಿ ಪರ ವಾತಾವರಣ ರಾಜ್ಯದಲ್ಲಿ ಇದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಹೆಚ್ಚು ಕಾರ್ಯಕ್ರಮಗಳು ರಾಜ್ಯದಲ್ಲಿ ನಡೆಯುತ್ತವೆ. ಇದೆಲ್ಲದರ ಪರಿಣಾಮ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನನ್ನು ಪಕ್ಷ ನಿರ್ಲಕ್ಷ್ಯ ಮಾಡುತ್ತಿಲ್ಲ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಎಲ್ಲಾ ಕಾರ್ಯಕ್ರಮಗಳಿಗೆ ನಾನು ಹೋಗುತ್ತಿದ್ದೇನೆ. ಸರ್ಕಾರಿ ಕಾರ್ಯಕ್ರಮಕ್ಕೆ ನಾನು ಹೋಗೋದು ಸರಿಯಲ್ಲ ಅಂತ ಚಾಮರಾಜನಗರಕ್ಕೆ ಹೋಗಿಲ್ಲ ಅಷ್ಟೇ. ಆದರೆ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನನ್ನನ್ನು ಯಾರೂ ಕರೆಯಬೇಕಾಗಿಲ್ಲ. ನನ್ನ ಕರ್ತವ್ಯ ನಾನು ಮಾಡುತ್ತೇನೆ. ಈ ಕಾರ್ಯಕ್ರಮಕ್ಕೆ ಕೊನೆ ಘಳಿಗೆಯಲ್ಲಿ ಆಹ್ವಾನ ಬಂತು ಎನ್ನುವುದು ಸುಳ್ಳು. ಮೊದಲೇ ಆಹ್ವಾನ ಇತ್ತು, ಆದರೆ ನಾನು ಹೋಗುವ ಸ್ಥಿತಿಯಲ್ಲಿ ಇರಲಿಲ್ಲ, ಅದಕ್ಕೆ ಹೋಗಿರಲಿಲ್ಲ. ಈಗ ನಡ್ಡಾ ಬರುತ್ತಿದ್ದು, ಅದಕ್ಕೆ ಹೋಗುತ್ತಿದ್ದೇನೆ ಎಂದರು.
ಬಿಜೆಪಿಯಲ್ಲಿ ಯಡಿಯೂರಪ್ಪರನ್ನ ಮುಗಿಸಲು ಷಡ್ಯಂತರ ನಡೆಯುತ್ತಿದೆ ಎಂಬ ವಿಚಾರದಲ್ಲಿ ಸತ್ಯಾಂಶ ಇಲ್ಲ. ಯಾರು ಯಾರನ್ನು ಮುಗಿಸಲು ಸಾಧ್ಯವಿಲ್ಲ. ನನಗೆ ನನ್ನದೇ ಆದ ಶಕ್ತಿ ಇದೆ. ನಾನು ಪಕ್ಷ ಕಟ್ಟಿ ಬೆಳೆಸಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ ಹಾಕಿದ್ದೇನೆ. ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಇದನ್ನೇ ಮುಂದುವರೆಸುತ್ತೇನೆ. ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳಿಲ್ಲ ಅಂತ ಹೇಳಿದರು.
ಇದನ್ನೂ ಓದಿ: ಗಡಿ ವಿವಾದ... ಸಚಿವರ ಸಮಿತಿ ರಚಿಸಿಕೊಳ್ಳುವಂತೆ ಅಮಿತ್ ಶಾ ಸೂಚನೆ: ಬೊಮ್ಮಾಯಿ