ಬೆಂಗಳೂರು: ವಿಧಾನಸೌಧದಲ್ಲಿ ಇಂದು ಕರೆಯಲಾಗಿರುವ ಸರ್ವಪಕ್ಷ ಸಭೆಗೆ ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಗೈರಿನ ಬೆನ್ನಲ್ಲೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸಭೆಗೆ ಹಾಜರಾಗುತ್ತಿಲ್ಲ ಎನ್ನುವ ಸಂದೇಶ ಕಳಿಸಿದ್ದಾರೆ. ಹಾಗಾಗಿ ಬಿಜೆಪಿಯ ಪ್ರಮುಖ ನಾಯಕರೇ ಸರ್ವಪಕ್ಷ ಸಭೆಗೆ ಗೈರಾಗುತ್ತಿದ್ದಾರೆ.
ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಿಮಿತ್ತ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸರ್ವ ಪಕ್ಷ ಸಭೆಗೆ ಆಗಮಿಸುತ್ತಿಲ್ಲ ಎಂದು ತಿಳಿಸಿದ ಬೆನ್ನಲ್ಲೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ಚೀಟ್ ಮೂಲಕ ಸರ್ವಪಕ್ಷ ಸಭೆಗೆ ಆಗಮಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಕಾವೇರಿ ವಿವಾದ ಕುರಿತು ಚರ್ಚಿಸಲು ನಿನ್ನೆ ತಡರಾತ್ರಿ ಸಭೆಗೆ ಆಹ್ವಾನ ನೀಡಿದೆ. ಆದರೆ, ನಾನು ನನ್ನ ಕ್ಷೇತ್ರದ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಿಂದ ಸರ್ಕಾರ ಕರೆದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಕಾವೇರಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ರಾಜ್ಯದ ವಸ್ತು ಸ್ಥಿತಿಯನ್ನು ಸುಪ್ರೀಂ ಕೋರ್ಟ್ ಮತ್ತು ಸಿಡಬ್ಲ್ಯೂಎಂಎಗೆ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡಬೇಕು ಎಂದು ಬೊಮ್ಮಾಯಿ ಮನವಿ ಮಾಡಿದ್ದಾರೆ.
ಹೆಚ್ಡಿಕೆ ಆರೋಗ್ಯ ವಿಚಾರಿಸಿದ ಕೆ ಎಸ್ ಈಶ್ವರಪ್ಪ: ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಇಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದರು. ಜೆಪಿ ನಗರದಲ್ಲಿರುವ ಹೆಚ್ಡಿಕೆ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ್ದ ಈಶ್ವರಪ್ಪ ಅವರು, ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದರಲ್ಲದೆ ರಾಜ್ಯ ರಾಜಕಾರಣದ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಶಾಸಕ ಸಾ ರಾ ಮಹೇಶ್ ಅವರು ಜೊತೆಯಲ್ಲಿ ಇದ್ದರು. ಇನ್ನೊಂದೆಡೆ ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಈಶ್ವರಪ್ಪ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಉಭಯ ನಾಯಕರು ಕೆಲ ಹೊತ್ತು ರಾಜಕೀಯದ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ದೆಹಲಿಗೆ ತೆರಳಿ ಮೈತ್ರಿ ಕುರಿತು ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಮಧ್ಯೆ ಕೆ ಎಸ್ ಈಶ್ವರಪ್ಪನವರು, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಜೆಡಿಎಸ್ ಬಿಜೆಪಿ ಮೈತ್ರಿಯನ್ನು ನಾನು ಸ್ವಾಗತ: ''ಜೆಡಿಎಸ್ ಬಿಜೆಪಿ ಮೈತ್ರಿಯನ್ನು ನಾನು ಸ್ವಾಗತ ಮಾಡುತ್ತೇನೆ'' ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಜೆಪಿ ನಗರದಲ್ಲಿರುವ ಹೆಚ್ ಡಿಕೆ ನಿವಾಸಕ್ಕೆ ಭೇಟಿ ನೀಡಿದ ನಂತರ, ಮಾಧ್ಯಮಗಳ ಜೊತೆ ಮಾತನಾಡಿದರು. ''ಹತ್ತನೇ ತಾರೀಖು ಕುಮಾರಸ್ವಾಮಿ ಅವರು ಕಾಲ್ ಮಾಡಿದ್ರು. ಎಲ್ಲಿ ಅಣ್ಣಾ ಕಾಣುಸ್ತಿಲ್ಲ'' ಎಂದರು. ನಾನು ಅದಕ್ಕೆ ಹೇಳಿದೆ ಮನೆ ದೇವ್ರು ಸನ್ನಿಧಿಯಲ್ಲಿ ಹೋಮ ನಡೆಯುತ್ತಿದೆ ಎಂದು ತಿಳಿಸಿದೆ. ಹಾಗಾಗಿ ಇಂದು ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ'' ಎಂದರು.
''ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರ ಚರ್ಚೆ ಆಗುತ್ತಿದೆ. ನಾಡಿನ ಜನರು ಸಂತಸಪಟ್ಟಿದ್ದಾರೆ, ಎಲ್ಲಾ ಒಳ್ಳೆದಾಗುತ್ತದೆ ಅಂತ ಹೇಳಿದೆ. ನಾವು ಜೆಡಿಎಸ್ ಒಟ್ಟಾಗಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು. ''ಸಿಎಂ ಸಿದ್ದರಾಮಯ್ಯಗೆ ಜಾತ್ಯತೀತ ಅನ್ನೋದು ಅಧಿಕಾರ ಹಿಡಿಯಲು ಮಾತ್ರನಾ? ಬಿಜೆಪಿ ಬೆಂಬಲದಿಂದ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು. ಮೊದಲ ಗೂಟದ ಕಾರು ಕಂಡಿದ್ದು ಬಿಜೆಪಿಯಿಂದ. ಅವತ್ತೇ ಹೇಳಬೇಕಿತ್ತು ಕೋಮುವಾದಿ ಬಿಜೆಪಿ ಅಂತ. ಅವತ್ತೂ ಹೇಳಿದ್ರೆ ಸ್ವಲ್ಪನಾದರೂ ಸತ್ಯ ಇರುತ್ತಿತ್ತು. ನಿಮಗೆ ಅಧಿಕಾರ ಇದ್ರೆ ಬಿಜೆಪಿ ಕೋಮುವಾದಿ, ಅಧಿಕಾರ ಇಲ್ಲ ಅಂದರೆ ಕೋಮುವಾದಿ ಅಲ್ವವೇ?'' ಎಂದು ಪ್ರಶ್ನಿಸಿದರು.
''ಸಿದ್ದರಾಮಯ್ಯನವರ ಕೋಮುವಾದದ ಬಣ್ಣ ಅವತ್ತು ಬಹಿರಂಗವಾಯ್ತು. ನಿಮಗೆ ಬೆಂಬಲ ಸಿಕ್ಕರೆ ಬಿಜೆಪಿ ರಾಷ್ಟ್ರೀಯವಾದಿ, ಇಲ್ಲದಿದ್ದರೆ ಕೋಮುವಾದಿನಾ?'' ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಬಗ್ಗೆ ಅವರ ಪಕ್ಷದ ಬಿ ಕೆ ಹರಿಪ್ರಸಾದೇ ಹೇಳಿದ್ದಾರೆ. ನನ್ನ ಹೆಸರೇಳಿಲ್ಲ ಅಂದವರು ದೆಹಲಿ ನಾಯಕರಿಗೆ ಯಾಕೆ ದೂರು ಕೊಟ್ರು. ಯಾಕೆ ದೆಹಲಿ ನಾಯಕರಿಂದ ನೊಟೀಸ್ ಕೊಟ್ರು'' ಎಂದು ಪ್ರಶ್ನಿಸಿದರು. ಬಿಜೆಪಿಗೆ ನನ್ನ ಹೆಣ ಕೂಡ ಹೋಗಲ್ಲ ಅಂತಾರೆ. ನಮಗೆ ಖಂಡಿತ ಅವರ ಹೆಣ ಬೇಡ, ನಮ್ಮ ವೈರಿಗೂ ನಾವು ಸಾವು ಬಯಸಲ್ಲ'' ಎಂದು ಈಶ್ವರಪ್ಪ ಕುಟುಕಿದರು.
ಇದನ್ನೂ ಓದಿ: ಮೈತ್ರಿ ವಿಚಾರದಲ್ಲಿ ವರಿಷ್ಠರ ನಿರ್ಧಾರಕ್ಕೆ ನಾವು ಬದ್ದ: ಬಿ.ಎಸ್.ಯಡಿಯೂರಪ್ಪ