ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕಳೆದ ಕೆಲ ದಿನಗಳಿಂದ ತಲೆದೋರಿರುವ ಗೊಂದಲಗಳ ನಿವಾರಣೆಗೆ ಖುದ್ದು ಪಕ್ಷದ ಹಿರಿಯ ನಾಯಕ ಹಾಗೂ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅಖಾಡಕ್ಕಿಳಿದಿದ್ದು, ಬೆಂಗಳೂರು ಶಾಸಕರ ಸಭೆ ನಡೆಸುತ್ತಿದ್ದಾರೆ. ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸಿ ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ ಧವಳಗಿರಿಯಲ್ಲಿ ಬೆಂಗಳೂರು ಬಿಜೆಪಿ ಶಾಸಕರ ಸಭೆ ನಡೆಯುತ್ತಿದೆ.
ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ಶಾಸಕರಾದ ಅಶ್ವತ್ಥ ನಾರಾಯಣ್, ಆರ್.ಅಶೋಕ್, ಎಂ.ಕೃಷ್ಣಪ್ಪ, ಕೆ.ಗೋಪಾಲಯ್ಯ, ಮುನಿರತ್ನ, ಮುನಿರಾಜು, ಎಸ್.ಆರ್.ವಿಶ್ವನಾಥ್, ಎಸ್.ರಘು, ಉದಯ್ ಗುರುಡಾಚಾರ್, ಸಂಸದರಾದ ಡಿ.ವಿ. ಸದಾನಂದ ಗೌಡ, ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದಾರೆ.
ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಸುರೇಶ್ ಕುಮಾರ್, ರವಿ ಸುಬ್ರಮಣ್ಯ, ಕೆ.ಜಿ.ರಾಮಮೂರ್ತಿ, ಸತೀಶ್ ರೆಡ್ಡಿ, ಮಂಜುಳಾ ಲಿಂಬಾವಳಿ ಹಾಗೂ ಸಂಸದ ತೇಜಸ್ವಿ ಸೂರ್ಯ ಸಭೆಗೆ ಗೈರಾಗಿದ್ದಾರೆ. ಕಮಿಷನ್ ಆರೋಪದ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸುವುದು, ಆಪರೇಷನ್ ಹಸ್ತದ ಸುಳಿಗೆ ಸಿಲುಕಿರುವ ವಲಸಿಗ ಶಾಸಕರ ಅಸಮಾಧಾನ ನಿವಾರಣೆ, ಭಿನ್ನಾಭಿಪ್ರಾಯ ಶಮನ, ಅತೃಪ್ತರ ಮನವೊಲಿಕೆ ಹಾಗೂ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ನಡೆಸುವ ಕುರಿತು ಮಹತ್ವದ ಸಮಾಲೋಚನೆ ನಡೆಯುತ್ತಿದೆ.
40 ಪರ್ಸೆಂಟ್ ಕಮಿಷನ್ ಆರೋಪ ಬಿಜೆಪಿಗೆ ದೊಡ್ಡ ಮಟ್ಟದ ಹಿನ್ನಡೆ ತಂದಿತ್ತು. ಇದೀಗ ಕಾಂಗ್ರೆಸ್ ಸರ್ಕಾರದ ಮೇಲೆ 15 ಪರ್ಸೆಂಟ್ ಕಮಿಷನ್ ಆರೋಪ ಬಂದಿದ್ದು, ಬಿಜೆಪಿ ಸರ್ಕಾರದ ಮೇಲೆ ಬಂದ ರೀತಿಯೇ ರಾಜ್ಯಪಾಲರವರೆಗೂ ದೂರು ಹೋಗಿದೆ. ಹಾಗಾಗಿ ಈ ವಿಚಾರದಲ್ಲಿ ಪರಿಣಾಮಕಾರಿ ಹೋರಾಟ ರೂಪಿಸುವ ಕುರಿತು ಶಾಸಕರ ಜೊತೆ ಯಡಿಯೂರಪ್ಪ ಸಮಾಲೋಚನೆ ನಡೆಸುತ್ತಿದ್ದಾರೆ. ಯಾವ ರೀತಿ ಹೋರಾಟ ನಡೆಸಬೇಕು, ಹೋರಾಟದ ಸ್ವರೂಪ ಯಾವ ರೀತಿ ಇರಬೇಕು, ರಾಜ್ಯಾದ್ಯಂತ ಅಭಿಯಾನದ ರೀತಿ ಹೋರಾಟ ರೂಪಿಸಬೇಕಾ ಎನ್ನುವ ಕುರಿತು ಮಹತ್ವದ ಮಾತುಕತೆ ನಡೆಸಯುತ್ತಿದೆ. ಶಾಸಕರ ಅಭಿಪ್ರಾಯ ಸಂಗ್ರಹಿಸಿ ನಂತರ ಯಡಿಯೂರಪ್ಪ ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ.
ಇದರ ನಂತರ ವಲಸಿ ಶಾಸಕರ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆಪರೇಷನ್ ಹಸ್ತದ ವದಂತಿ ಇದೆ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಕ್ಷೇತ್ರದ ಸ್ಥಳೀಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕ್ರಮಕ್ಕೂ ಆಗ್ರಹಿಸಿ ಬೆಂಬಲಿಗರ ಸಭೆಯನ್ನೂ ನಡೆಸಿದ್ದಾರೆ. ಇದು ಪಕ್ಷ ತೊರೆಯುವ ಮೊದಲ ಹಂತದ ನಡೆಯಾಗಿರುವ ಕಾರಣ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಸಮಾಲೋಚನೆ ನಡೆಯಲಿದೆ ಎನ್ನಲಾಗಿದೆ.
ಇದರ ಜೊತೆಗೆ ಪಕ್ಷವನ್ನು ಬೆಂಗಳೂರಿನಲ್ಲಿ ಮತ್ತೆ ಪರಿಣಾಮಕಾರಿಯಾಗಿ ಸಂಘಟಿಸುವ ಕುರಿತು ಚರ್ಚೆ ನಡೆಸಲಾಗುತ್ತದೆ. ವಾರ್ಡ್‌ಗಳ ಕಡಿತ ಬಿಜೆಪಿ ಮೇಲೆ ಯಾವ ಪರಿಣಾಮ ಬೀರಲಿದೆ, ಇದಕ್ಕೆ ಬಿಜೆಪಿ ಯಾವ ರೀತಿ ಸಿದ್ಧತೆ ನಡೆಸಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ.
ಇದನ್ನೂ ಓದಿ: ಕಾಂಗ್ರೆಸ್ ವೈಫಲ್ಯಗಳನ್ನು ಜನರಿಗೆ ತಲುಪಿಸಲು ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ: ಜಿ.ಟಿ.ದೇವೇಗೌಡ