ಬೆಂಗಳೂರು: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ರೈತರ ಸಾಲಮನ್ನಾ ಮಾಡುವ ಭರವಸೆ ನೀಡಿದ್ದ ಕುಮಾರಸ್ವಾಮಿ ಮಾತು ತಪ್ಪಿದ್ದಾರೆ. ರೈತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅನ್ಯಾಯವೆಸಗಿದ್ದು, ಲೋಕಸಭಾ ಚುನಾವಣೆ ಹಾಗೂ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನ್ ಮಾನವತಾವಾದಿ ಬಸವಣ್ಣನವರ ಜಯಂತಿಯನ್ನು ಇಂದು ನಾಡಿನ ಉದ್ದಗಲಕ್ಕೂ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ನಾಡಿನ ಸಮಸ್ತ ಜನತೆಗೆ ಬಸವೇಶ್ವರ ಜಯಂತಿ ಶುಭಾಶಯ ಕೋರುತ್ತೇನೆ ಎಂದರು.
ರೈತರಿಗೆ ಋಣಮುಕ್ತ ಪ್ರಮಾಣಪತ್ರ ಕೊಡುತ್ತೇವೆ ಎಂದಿದ್ದವರು ಈಗ ವರಸೆ ಬದಲಿಸಿದ್ದಾರೆ. ಸಾಂತ್ವನ ಪತ್ರ ಕೊಡುವುದಾಗಿ ಹೇಳುತ್ತಿದ್ದಾರೆ. ಇದು ಸಿಎಂ ಕುಮಾರಸ್ವಾಮಿ ಅನ್ನದಾತರಿಗೆ ಮಾಡಿದ ದೊಡ್ಡ ಮೋಸ. ಇದನ್ನು ನಾವು ಖಂಡಿಸುತ್ತೇವೆ. ರೈತ ಸಮುದಾಯದ ಜೊತೆ ಇವರು ಚೆಲ್ಲಾಟ ಆಡ್ತಿದ್ದಾರೆ ವಾಗ್ದಾಳಿ ನಡೆಸಿದರು.
ಇನ್ನು ಚಿಂಚೋಳಿ ಉಪ ಚುನಾವಣೆ ಪ್ರಚಾರದ ನಿಮಿತ್ತ ಕಲಬುರಗಿ ಕಡೆ ಹೋಗಿದ್ದೆ. ಕಲಬುರಗಿಯಲ್ಲಿ ಜನ ನೀರಿಗಾಗಿ ಕಷ್ಟ ಪಡ್ತಿರೋದನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ. ಅಧಿಕಾರಿಗಳು, ಸಚಿವರು ಕುಡಿಯೋ ನೀರಿನ ಸಮಸ್ಯೆ, ಬರಗಾಲದ ಕಡೆ ಗಮನ ಕೊಡುತ್ತಿಲ್ಲ. ಹೇಳೋರು ಕೇಳೋರು ಯಾರೂ ಇಲ್ಲ, ಈ ಬಗ್ಗೆ ಗಮನ ಹರಿಸೋಕೆ ಸಿಎಂಗೆ ಬಿಡುವಿಲ್ಲ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬಾವಿಯಲ್ಲಿ ಒಂದು ಕೊಡ ನೀರು ತೆಗೆಯಲು ಹೆಣ್ಣು ಮಕ್ಕಳು ಎಷ್ಟು ಕಷ್ಟ ಪಡ್ತಿದ್ದಾರೆ ಅಂತ ಮಾಧ್ಯಮಗಳಲ್ಲಿ ನೀವೆಲ್ಲಾ ತೋರಿಸಿದ್ದೀರಿ. ಪರಿಸ್ಥಿತಿ ಹೀಗಿದ್ದರೂ ಟ್ಯಾಂಕರ್ ಮೂಲಕವೂ ನೀರು ಕೊಡ್ತಿಲ್ಲ ಎಂದು ಯಡಿಯೂರಪ್ಪ ಸರ್ಕಾರದ ವಿರುದ್ಧ ಗುಡುಗಿದರು.
ಜಾನುವಾರುಗಳಿಗೆ ಗೋಶಾಲೆ, ಮೇವು ಬ್ಯಾಂಕ್ಗಳನ್ನು ಆರಂಭಿಸಿಲ್ಲ. ಸಿಎಂ ಕಣ್ಣು ಮುಚ್ಚಿಕೊಂಡು ಕೂತಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು, ಹಣ ಬಿಡುಗಡೆ ಮಾಡಬೇಕು. ಎರಡು ಮೂರು ದಿನದಲ್ಲಿ ಸುಧಾರಣೆ ಮಾಡದೇ ಇದ್ದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಅಂತೂ ಸತ್ತಿದೆ. ಅಧಿಕಾರಿಗಳಿಗೆ ಏನಾಗಿದೆ ಈಗಲಾದರೂ ತಕ್ಷಣ ಬರ ವೀಕ್ಷಣೆ ಮಾಡಲಿ, ಕೇಂದ್ರ ಯಾವುದೇ ನೆರವು ನೀಡಲು ಸಿದ್ಧವಿದೆ. ಆದರೆ ಈ ಸರ್ಕಾರ ರಾಜಕೀಯ ದೊಂಬರಾಟದಲ್ಲಿ ನಿರತವಾಗಿದೆ ಎಂದು ಮೈತ್ರಿ ಸರ್ಕಾರದ ವಿರುದ್ದ ಯಡಿಯೂರಪ್ಪ ಕಿಡಿಕಾರಿದರು.
ತುಮಕೂರಿನಲ್ಲೂ ಕಾಂಗ್ರೆಸ್ ಮತಗಳು ಬಿಜೆಪಿಗೆ ಬಂದಿವೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಯಡಿಯೂರಪ್ಪ, ಫಲಿತಾಂಶಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ತುಮಕೂರಲ್ಲೂ ಬಿಜೆಪಿ ಗೆಲ್ಲೋ ವಿಶ್ವಾಸ ಇದೆ ಎಂದರು.