ಬೆಂಗಳೂರು: ಗ್ಲೋಕಲ್, ಅಮೃತ್ ಕಾಲ್ ಮುಂತಾದ ಹೊಸ ಪದಗಳನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಹೇಳಿದ್ದು, ಉದ್ಯಮಿ ಅದಾನಿಗೆ ಸಂಬಂಧಿಸಿ ಪ್ರಧಾನಿಗೆ ಐದು ಪ್ರಶ್ನೆಗಳನ್ನು ಕೇಳಿ ಉತ್ತರಿಸುವಂತೆ ಸವಾಲು ಹಾಕಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, ನಮ್ಮ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಪ್ರಧಾನಿ ಮೋದಿಯವರಿಗೆ ಒಂದು ಪತ್ರ ಬರೆದಿದ್ದರು. ಅದರಲ್ಲಿ, ಪ್ರಧಾನಿ ಹೆಚ್ಚಿನ ಸಂದರ್ಭದಲ್ಲಿ ಚುನಾವಣೆ ಇದ್ದಾಗಲೇ ಬರುತ್ತಾರೆ ಎಂದು ಹೇಳಿದ್ದರು. ಕಳೆದ ಚುನಾವಣೆ ವೇಳೆ ಬಂದಿದ್ದಾಗ ಶೇ10ರಷ್ಟು ಕಮಿಷನ್ ಎಂದು ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿ ಹೋಗಿದ್ದರು. ಈಗಿನದು ಶೇ 40ರಷ್ಟು ಸರ್ಕಾರ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ ಎಂದು ಹೇಳಿದರು.
ಇದರ ಬಗ್ಗೆ ಪ್ರಧಾನಿ ಕಡೆಯಿಂದ ಒಂದೇ ಒಂದು ಸ್ಪಷ್ಟನೆ ಬಂದಿಲ್ಲ. ಅವರು ಯಾಕೆ ಶೇ 40ರಷ್ಟು ಕಮಿಷನ್ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ಅವರಿಗೆ ಮಾತ್ರ ಗೊತ್ತಿದೆ. ನಮ್ಮ ಹಾಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುವುದಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಅವರ ಮನಸ್ಸಿನಲ್ಲೇನಿದೆ ಎಂಬುದು ನಮಗೆ ಗೊತ್ತಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಕುಟುಕಿದರು.
ಹಿಂಡನ್‌ಬರ್ಗ್ ರಿಪೋರ್ಟ್ :ಅದಾನಿ ಕಂಪನಿಗೆ ಸಂಬಂಧಿಸಿ ಹಿಂಡನ್‌ಬರ್ಗ್ ರಿಪೋರ್ಟ್ ಬಂದಿದೆ. ಇದರ ನಂತರ ಕಂಪನಿಯ ಷೇರು ಕುಸಿಯುತ್ತಿದೆ. ಕಂಪನಿಗಳ ಷೇರುಗಳು ಏರುವುದು ಹಾಗೂ ಇಳಿಯುವುದು ಸಾಮಾನ್ಯ. ಆದರೆ, ನೀವು ಸರ್ಕಾರಿ ಹಣವನ್ನು ಆ ಕಂಪನಿಗೆ ಹಾಕಿ, ಕಂಪನಿಗೆ ಆಸ್ಪದ ಮಾಡಿ ಕೊಡುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದರು. ಎಲ್‌ಐಸಿ ಎಂಬ ಸರ್ಕಾರಿ ಕಂಪನಿಯಿಂದ ಸುಮಾರು 86,000 ಕೋಟಿ ರೂ. ಅದಾನಿ ಕಂಪನಿಯಲ್ಲಿ ಹೂಡಿಕೆಯಾಗಿದೆ. ಎಸ್‌ಬಿಐ ಸಂಸ್ಥೆಯಿಂದ ಸುಮಾರು 1 ಲಕ್ಷ ಕೋಟಿ ರೂ. ಅದಾನಿ ಕಂಪನಿಯಲ್ಲಿ ಹೂಡಿಕೆಯಾಗಿದೆ. ಕರ್ನಾಟಕದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ಎಸ್‌ಬಿಐ ಜೊತೆ 2017ರಲ್ಲಿ ವಿಲೀನವಾಗಿದೆ. ಅಂದರೆ, ಕನ್ನಡಿಗರ ದುಡ್ಡು ಎಸ್‌ಬಿಐನಲ್ಲಿದ್ದು, ಈ ಹಣವೆಲ್ಲ ಇಂದು ಅದಾನಿ ಕಂಪನಿಯಲ್ಲಿ ಹೂಡಿಕೆಯಾಗಿದೆ ಎಂದು ಬ್ರಿಜೇಶ್ ಕಾಳಪ್ಪ ಕಿಡಿಕಾರಿದರು.
ಅದಾನಿ ಕಂಪನಿಗಳು ಸಂಕಷ್ಟದಲ್ಲಿ : ಅದಾನಿ ಕಂಪನಿಗಳು ದಿನೇದಿನೇ ಕುಂಟುತ್ತಾ ಇದೆ. ಈ ಸಂದರ್ಭದಲ್ಲಿ ನಾವು ಪ್ರಧಾನಿ ಮೋದಿಯವರಿಗೆ ಕೆಲವು ಪ್ರಶ್ನೆಗಳನ್ನು ಕೇಳ ಬಯಸುತ್ತೇವೆ ಎಂದು ಐದು ಪ್ರಶ್ನೆಗಳನ್ನು ಕೇಳಿದರು.
- 2015ರ ಮೇ ತಿಂಗಳಿನಲ್ಲಿ ತಾವು ಗೌತಮ್ ಅದಾನಿ ಜೊತೆ ಚೀನಾಗೆ ಹೋಗಿದ್ದ ವೇಳೆ ನಡೆದ 26 ಒಪ್ಪಂದಗಳಲ್ಲಿ 22 ಬಿಲಿಯನ್ ಡಾಲರ್ ಮೊತ್ತದ ಸಿಂಹಪಾಲು ಅದಾನಿಯವರಿಗೆ ಬಂದಿದೆಯೋ ಇಲ್ಲವೋ?
- ನೀವು 2014 ಹಾಗೂ 2019ರ ಚುನಾವಣೆಯಲ್ಲಿ ಹೆಚ್ಚಾಗಿ ಓಡಾಡಿದ್ದು ಅದಾನಿಯವರ ಏರ್‌ಕ್ರಾಫ್ಟ್‌ಗಳಲ್ಲಿ ಹೌದೋ ಅಲ್ಲವೋ?
- ಆಸ್ಟ್ರೇಲಿಯಾ ಪ್ರಧಾನಿ ಜೊತೆ ಕಾರ್ಮೈಕಲ್ ಮೈನಿಂಗ್ ಕಂಪನಿಗೆ ಲಾಭ ಮಾಡಿಕೊಡಲು ಪ್ರಧಾನಿ ಮೋದಿ ಮಾತನಾಡಿದ್ದು ಸತ್ಯವೋ ಸುಳ್ಳೋ?
- ಮಂಗೋಲಿಯಾಗೆ 2020ರಲ್ಲಿ ಮೋದಿಯವರು ಹೋದಾಗ ಅಲ್ಲಿನ ಪ್ರಧಾನಿಗೆ ಅದಾನಿಯನ್ನು ಮೋದಿ ಪರಿಚಯ ಮಾಡಿಸಿಕೊಟ್ಟಿದ್ದು ನಿಜವೋ ಸುಳ್ಳೋ?
- ಯಾವುದಾದರೂ ಒಂದು ಭಾರತೀಯ ಕಂಪನಿ ವಿದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂದರ್ಭದಲ್ಲಿ ಆ ದೇಶದಿಂದಲೇ ಸಹಾಯ ಪಡೆಯುತ್ತದೆಯೇ ಹೊರತು ನಮ್ಮ ದೇಶದಿಂದ ಪಡೆಯುವುದಿಲ್ಲ. ಆದರೆ ಕಾರ್ಮೈಕಲ್ ಪ್ರಾಜೆಕ್ಟ್‌ಗೆ ಅದಾನಿ ಎಸ್‌ಬಿಐನಿಂದ 10,000 ಕೋಟಿ ರೂ. ಸಹಾಯಧನ ಪಡೆದಿದ್ದು ನಿಜವೋ ಸುಳ್ಳೋ? ಅಲ್ಲಿನ ಲೋಕಲ್ ಬ್ಯಾಂಕ್‌ಗಳು ಏಕೆ ಸಹಾಯ ಮಾಡಿಲ್ಲ ಎಂಬ ವಿಚಾರ ಕೂಡ ಕಾಡುತ್ತಿದೆ. ಈ ಐದು ಪ್ರಶ್ನೆಗಳನ್ನು ಬೆಂಗಳೂರಿಗೆ ಬಂದಿರುವ ಪ್ರಧಾನಿಗೆ ಕೇಳಲು ಬಯಸುತ್ತೇನೆ ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
ಮೂರನೇ ಬಾರಿ ಪ್ರಧಾನಿ ಆಗಮನ : ಪ್ರಧಾನಿ ಮೋದಿ ಈ ವರ್ಷದಲ್ಲೇ ಮೂರನೇ ಬಾರಿ ಬೆಂಗಳೂರಿಗೆ ಬಂದಿದ್ದಾರೆ. ರಸ್ತೆ ಗುಂಡಿಗಳಿಂದ ಐವತ್ತು ಜನ ಮೃತಪಟ್ಟಿರುವಾಗ ಬನ್ನಿ ಎಂದು ಕರೆದಾಗ ಮೋದಿ ಬರಲಿಲ್ಲ. ಕಾವೇರಿ, ಮೇಕೆದಾಟು ವಿಚಾರದಲ್ಲಿ ಕುಡಿಯಲು ನೀರಿಲ್ಲ ಎಂದಾಗಲೂ ಬರಲಿಲ್ಲ. ಕೃಷ್ಣಾ ನದಿ ವಿಚಾರದಲ್ಲಿ ಅಂತಿಮ ನೋಟಿಫಿಕೇಷನ್ ಮಾಡಿ ಎಂದು ಕೇಳಿದಾಗಲೂ ಬರಲಿಲ್ಲ.
ಮಹದಾಯಿ ವಿಚಾರಕ್ಕೂ ಬರಲಿಲ್ಲ, ಬೆಳಗಾವಿ ವಿಚಾರದಲ್ಲಿ ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಗಡಿ ವಿವಾದ ಸಂಭವಿಸಿದಾಗಲೂ ಬರಲಿಲ್ಲ. ಬಿಜೆಪಿಯ 26 ಸಂಸದರು ಕೂಡ ಬರಲಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಮೋದಿ ಹಾಜರಿರುತ್ತಾರೆ. ಆದ್ದರಿಂದ ನಾವು ಮೇಲಿನ ಪ್ರಶ್ನೆಗಳನ್ನು ಕೇಳಿದ್ದೇವೆ. ಇದಕ್ಕೆ ಪ್ರಧಾನಿ ಉತ್ತರ ನೀಡಲಿ. ಇಲ್ಲದಿದ್ದರೆ ಇದು ಗ್ಲೋಕಲ್ ಅಲ್ಲ, ಕರ್ನಾಟಕ ಜನತೆಯ ಗೋತಾ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
ಇದನ್ನೂ ಓದಿ :ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ಅದಾನಿ ಸಮೂಹ ವಿರುದ್ಧ ತನಿಖೆಗೆ ಕಾಂಗ್ರೆಸ್ ನಾಯಕರ ಒತ್ತಾಯ