ಬೆಂಗಳೂರು: ಹಾವೇರಿ ಜಿಲ್ಲೆಯನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಮಾಡಿದ ಕೀರ್ತಿ ಸಿ. ಎಂ. ಉದಾಸಿ ಅವರಿಗೆ ಸಲ್ಲುತ್ತದೆ. ಪುರಸಭೆ ಅಧ್ಯಕ್ಷ ಸ್ಥಾನದಿಂದ ಸಚಿವ ಸ್ಥಾನದವರೆಗೆ ಆನೆ ನಡೆದದ್ದೇ ದಾರಿ ಎನ್ನುವಂತೆ ಪಕ್ಷಗಳನ್ನು ಬದಲಿಸುತ್ತಲೇ ಬೆಳೆದು ಬಂದಿದ್ದರು. 9 ಬಾರಿ ಸ್ಪರ್ಧಿಸಿದ್ದು, ಬರೋಬ್ಬರಿ 6 ಬಾರಿ ಗೆದ್ದಿದ್ದಾರೆ. ಉದಾಸಿ ರಾಜಕೀಯ ಹಾದಿಯ ಹಿನ್ನೋಟ ಇಲ್ಲಿದೆ.
1937 ಫೆಬ್ರವರಿ 2ರಂದು ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ ಜನಿಸಿದರು. ತಂದೆ ಮಹಾಲಿಂಗಪ್ಪ ತಾಯಿ ಸಾವಿತ್ರಮ್ಮ. ಕೇವಲ 8ನೇ ತರಗತಿ ವಿದ್ಯಭ್ಯಾಸ ಮುಗಿಸಿದ ಅವರು ರಾಜಕೀಯಕ್ಕೆ ಧುಮುಕಿದರು. ಉದಾಸಿ ಪತ್ನಿ ಹೆಸರು ನೀಲಮ್ಮ(ನೀಲಾಂಭಿಕಾ) ಹಾಗೂ ಓರ್ವ ಪುತ್ರ ಮತ್ತು ಓರ್ವ ಪುತ್ರಿಯ ಹೊಂದಿದ್ದಾರೆ.
ಜನತಾ ಪರಿವಾರ ಹಿನ್ನೆಲೆಯ ಬಿಜೆಪಿಯ ಹಿರಿಯ ನಾಯಕ ಸಿ.ಎಂ. ಉದಾಸಿ, ಮಹಾಲಿಂಗಪ್ಪನವರ ಪುತ್ರ. ಬಡ ಕುಟುಂಬದಿಂದ ಬಂದಿದ್ದ ಸಿ. ಎಂ. ಉದಾಸಿ ಅಂಗಡಿಯಲ್ಲಿ ಅಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಯುವಕ, ಆಗಿನ ಶಾಸಕರಿಂದ ಅಕ್ಕಿ ವ್ಯಾಪಾರಕ್ಕೆ ತೊಂದರೆಯಾಗಿದ್ದಕ್ಕೆ ರಾಜಕೀಯಕ್ಕೆ ಪ್ರವೇಶಿಸಿ ರಾಜಕೀಯವನ್ನೇ ಬದುಕಾಗಿಸಿಕೊಂಡು ಬೆಳೆದು ಬಂದರು. ಐದು ದಶಕದ ರಾಜಕೀಯ ಜೀವನದಲ್ಲಿ ಜನತಾ ಪಕ್ಷ, ಜನತಾ ದಳ, ಬಿಜೆಪಿ, ಕೆಜೆಪಿ ಸುತ್ತಿ ಮತ್ತೆ ಬಿಜೆಪಿಗೆ ಮರಳಿದ್ದರು.
ಒಟ್ಟು 6 ಬಾರಿ ಗೆಲುವು:
1974ರಲ್ಲಿ ನಗರ ಸುಧಾರಣಾ ಸಮಿತಿ ಮೂಲಕ ಹಾನಗಲ್ ಪುರಸಭೆಗೆ ಸ್ಪರ್ಧೆ ಮಾಡಿದ್ದ ಉದಾಸಿ ತನ್ನ 15 ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ಮೂಲಕ ಪುರಸಭೆ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದರು. ನಂತರ 1983ರಲ್ಲಿ ಪಕ್ಷೇತರವಾಗಿ, 1985ರಲ್ಲಿ ಜನತಾ ಪಕ್ಷದಿಂದ, 1994ರಲ್ಲಿ ಮತ್ತೆ ಜನತಾದಳದಿಂದ, 2006ರಲ್ಲಿ ಬಿಜೆಪಿಯಿಂದ ನಂತರ 2008ರಲ್ಲಿ ಬಿಜೆಪಿಯಿಂದ ಮರು ಆಯ್ಕೆಯಾಗಿ 2018ರಲ್ಲಿ 3ನೇ ಬಾರಿಗೆ ಬಿಜೆಪಿಯಿಂದ ಗೆದ್ದು ಒಟ್ಟು 6 ಬಾರಿ ಗೆಲುವು ಸಾಧಿಸಿದ್ದರು.
ಮೊದಲ ಬಾರಿ ಗೆದ್ದಾಗಲೇ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಉದಾಸಿ ನಂತರ 2ನೇ ಬಾರಿ ಜನತಾ ಪಕ್ಷದಿಂದ ಆಯ್ಕೆಯಾದ ವೇಳೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯರಾಗಿ, ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಜೆಡಿಎಸ್ ಸರ್ಕಾರದಲ್ಲೂ ಸಚಿವಗಿರಿ
1990ರಲ್ಲಿ ಧಾರವಾಡ ಜಿಲ್ಲೆ ಜನತಾದಳ ಅಧ್ಯಕ್ಷರಾಗಿ ಸಂಘಟನೆಯಲ್ಲಿ ತೊಡಗಿದ ಉದಾಸಿ 1994ರಲ್ಲಿ ಜಯಗಳಿಸಿ ಜೆ.ಹೆಚ್ ಪಟೇಲ್ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ ಕೆಲಸ ಮಾಡಿದ್ದರು. ನಂತರ 2004ರಲ್ಲಿ ಪಕ್ಷ ಬದಲಿಸಿ ಬಿಜೆಪಿ ಸೇರ್ಪಡೆಯಾದ ಉದಾಸಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
ನಂತರ 2008ರಲ್ಲಿ ಬಿಜೆಪಿಯಿಂದ ಮರು ಆಯ್ಕೆಯಾಗಿದ್ದು ಮಾತ್ರವಲ್ಲದೆ ಇಡೀ ಹಾವೇರಿ ಜಿಲ್ಲೆಯನ್ನೇ ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದರು. ನಿರೀಕ್ಷೆಯಂತೆ ಯಡಿಯೂರಪ್ಪ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾದರು. ಬದಲಾದ ರಾಜಕೀಯ ವಿದ್ಯಮಾನದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಯಡಿಯೂರಪ್ಪ ಅವರ ಹಿಂದೆಯೇ ಕೆಜೆಪಿಗೆ ಸೇರ್ಪಡೆಯಾದರು.
ಕೆಜೆಪಿಯಿಂದ ಸ್ಪರ್ಧಿಸಿ ಸೋಲು
ಆದರೆ ಕೆಜೆಪಿ ಅಭ್ಯರ್ಥಿಯಾಗಿ 2013ರಲ್ಲಿ ಸೋಲಿನ ರುಚಿ ನೋಡುವಂತಾಯಿತು. ಮತ್ತೆ ಯಡಿಯೂರಪ್ಪ ಅವರೊಂದಿಗೆ ಬಿಜೆಪಿಗೆ ವಾಪಸ್ಸಾದ ಉದಾಸಿ 2018ರಲ್ಲಿ ಬಿಜೆಪಿಯಿಂದ ಗೆದ್ದರು. ಬಿಜೆಪಿ ಕೋರ್ ಕಮಿಟಿ ಸದಸ್ಯರೂ ಆದರು, ಆದರೆ ವಯೋಸಹಜ ಆರೋಗ್ಯ ಸಮಸ್ಯೆ ಕಾರಣಕ್ಕೆ ಸಂಪುಟದಿಂದ ದೂರ ಇರುವಂತಾಗಿತ್ತು.
ಕ್ಷೇತ್ರದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚನೆ, ಬಸಾಪುರ ಏತ ನೀರಾವರಿ ಯೋಜನೆ ಪೂರ್ಣ, ಹತ್ತಾರು ಶಾಲೆಗಳ ನಿರ್ಮಾಣ, ಐಟಿಐ, ಪದವಿ ಕಾಲೇಜುಗಳ ಸ್ಥಾಪನೆ, ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಸುಧಾರಣೆ, ಕಾಂಕ್ರಿಟ್ ರಸ್ತೆ ನಿರ್ಮಾಣ, ಜಿಲ್ಲಾಸ್ಪತ್ರೆ, ಇಂಜಿನಿಯರಿಂಗ್ ಕಾಲೇಜು ಮೇಲ್ದರ್ಜೆಗೆ ಏರಿಸಿ ಹತ್ತಾರು ಜನಪರ ಕಾರ್ಯ ಮಾಡಿದ್ದಾರೆ ಜನಪರ ನಾಯಕ ಎಂಬ ಖ್ಯಾತಿ ಗಳಿಸಿದ್ದರು.