ಬೆಂಗಳೂರು: ಮಗುವಿಗೆ ಎದೆಹಾಲು ನೀಡುವುದು ತಾಯಿಯಿಂದ ಬೇರ್ಪಡಿಸಲಾಗದ ಹಕ್ಕು. ಇದನ್ನು ಸಂವಿಧಾನದ ಪರಿಚ್ಛೇದ 21ರ ಮೂಲಭೂತ ಹಕ್ಕು ಖಚಿತಪಡಿಸುತ್ತದೆ. ಇದೇ ಹಕ್ಕನ್ನು ಮಗುವಿಂದಲೂ ಪ್ರತ್ಯೇಕಿಸಲಾಗದು ಎಂದು ಹೈಕೋರ್ಟ್ ಪ್ರಕರಣವೊಂದನ್ನು ಇತ್ಯರ್ಥಪಡಿಸುವ ವೇಳೆ ಅಭಿಪ್ರಾಯಪಟ್ಟಿದೆ.
ಹುಟ್ಟುತ್ತಲೇ ಹೆರಿಗೆ ಆಸ್ಪತ್ರೆಯಿಂದ ಕಾಣೆಯಾಗಿರುವ ಮಗುವನ್ನು ಸಾಕು ತಾಯಿಯಿಂದ ಹಿಂಪಡೆದು ತನ್ನ ಸುಪರ್ದಿಗೆ ನೀಡುವಂತೆ ಕೋರಿ ಮಗುವಿನ ತಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಇತ್ಯರ್ಥಪಡಿಸುವ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಾಕು ತಾಯಿ ಮಗುವನ್ನು ನೈಜ ತಾಯಿಗೆ ಹಿಂದಿರುಗಿಸುವಂತೆ ಸೂಚಿಸಿರುವ ಪೀಠ, ಯಾವ ತಪ್ಪು ಇಲ್ಲದೆಯೂ ಈ ಮಗು ತನ್ನ ತಾಯಿಯಿಂದ ಹಾಲುಣಿಸದೆ ಬೇರ್ಪಟ್ಟಿರುವುದು ನಿಜಕ್ಕೂ ದುರಾದೃಷ್ಟಕರ. ನಾಗರಿಕ ಸಮಾಜದಲ್ಲಿ ಇಂತಹ ಘಟನೆಗಳು ಸಂಭವಿಸಬಾರದು. ಹಾಗೆಯೇ, ಹಾಲುಣಿಸುವಿಕೆಯು ತಾಯಿಯಿಂದ ಬೇರ್ಪಡಿಸಲಾಗದ ಹಕ್ಕು ಎಂದು ಗುರುತಿಸಬೇಕಾಗಿದೆ. ಶಿಶುವಿನ ಎದೆಹಾಲುಣಿಸುವಿಕೆಯೂ ಈ ಹಕ್ಕಿನೊಂದಿಗೆ ಅಳವಡಿಸಬೇಕಿದೆ ಎಂದಿದೆ.
ವಿಚಾರಣೆ ವೇಳೆ ಸಾಕು ತಾಯಿ ಪರ ವಕೀಲರು ವಾದಿಸಿ, ನೈಜ ತಾಯಿಗೆ ಈಗಾಗಲೇ ಎರಡು ಮಕ್ಕಳಿವೆ. ಸಾಕು ತಾಯಿಗೆ ಒಂದು ಮಗುವೂ ಇಲ್ಲ. ಜತೆಗೆ ಇಷ್ಟು ಕಾಲ ಸಾಕು ತಾಯಿ ಮಗುವನ್ನು ತುಂಬಾ ಪ್ರೀತಿಯಿಂದ ಆರೈಕೆ ಮಾಡಿದ್ದಾರೆ. ಹೀಗಾಗಿ, ಮಗುವನ್ನು ಸಾಕು ತಾಯಿ ಸುಪರ್ದಿಗೆ ನೀಡಬೇಕು ಎಂಬ ಕೋರಿಕೆಯನ್ನ ಪೀಠ ತಿರಸ್ಕರಿಸಿದೆ. ಹಾಗೆಯೇ, ಅನುವಂಶಿಕ ಪೋಷಕರ ಹಕ್ಕುಗಳ ಮುಂದೆ ಅಪರಿಚಿತರ ಹಕ್ಕುಗಳನ್ನು ಪರಿಗಣಿಸಲಾಗದು ಎಂದು ಪೀಠ ತಿಳಿಸಿದೆ.
ಇದನ್ನೂ ಓದಿ: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ: ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್