ಬೆಂಗಳೂರು: ''ನಗರದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮೂಲಕ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಲು ಸೂಕ್ತ ಯೋಜನೆಯನ್ನು ರೂಪಿಸಬೇಕಿದೆ'' ಎಂದು ಜಲಮಂಡಳಿಯ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಹಾಗೂ ಜಲ ಸುರಕ್ಷಾ ಬೆಂಗಳೂರಿನ ನೋಡಲ್ ಅಧಿಕಾರಿ ಕೆ.ಎನ್ ರಾಜೀವ್ ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಜಲಸುರಕ್ಷಾ, ತೃಪ್ತಿಕರ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ದಯಾನಂದ ಸಾಗರ್ ತಾಂತ್ರಿಕ ಮಹಾವಿದ್ಯಾಲಯದ ಕಾನ್ಫರೆನ್ಸ್ ಹಾಲ್ನಲ್ಲಿ ನಡೆದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಅವರು, ''ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 7 ವಿವಿಧ ವಿಷಯಗಳಲ್ಲಿ ಬರುವ ಜಲ ಸುರಕ್ಷಾ ಬೆಂಗಳೂರಿಗೆ ನಾಗರಿಕರಿಂದ ಬಂದಂತಹ 9,000ಕ್ಕೂ ಹೆಚ್ಚು ಸಲಹೆಗಳು ಹಾಗೂ ಇಂದಿನ ಸಂಕಿರಣದಲ್ಲಿ ಬಂದಂತಹ ಸಲಹೆಗಳನ್ನು ಕ್ರೋಢೀಕರಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು'' ಎಂದರು.
''ಬೆಂಗಳೂರು ನಗರದಾದ್ಯಂತ ಜಲಮಂಡಳಿ ವತಿಯಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ. ಅದರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಜಲಮಂಡಳಿಯು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಜನರಿಗೆ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ದಿನದ 24 ಗಂಟೆಯೂ ಜಲಮಂಡಳಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
''ನಗರದಲ್ಲಿ ಹೆಚ್ಚಾಗಿ ಕಾವೇರಿ ನೀರಿನ ಮೆಲೆ ಅವಲಂಬಿತರರಾಗಿದ್ದು, ಪರ್ಯಾಯ ವ್ಯವಸ್ಥೆಗಳಿಗೆ ನಾವು ಮುಂದಾಗಬೇಕಿದೆ. ಜನಗರಿಗೆ ಗುಣಮಟ್ಟ ನೀರನ್ನು ನೀಡುವ ಸಲುವಾಗಿ ರಿಯಲ್ ಟೈಮ್ ಆನ್‌ಲೈನ್ ನೀರಿನ ಗುಣಮಟ್ಟ ಮಾನಿಟರಿಂಗ್ ಸ್ಟೇಷನ್ಗಳ ಮೂಲಕ ಮೇಲ್ವಿಚರಾಣೆ ಮಾಡಲಾಗುತ್ತದೆ'' ಎಂದು ಹೇಳಿದರು.
ಜಲಸುರಕ್ಷಾ ಬೆಂಗಳೂರು ವಿಷಯದ ವಿಚಾರ ಸಂಕಿರಣದಲ್ಲಿನ ಪ್ರಮುಖ ಸಲಹೆಗಳು:
- ಕೊಳಚೆ ನೀರುನ್ನು ರಾಜಕಾಲುವೆ ಹಾಗೂ ಕೆರೆಗಳಿಗೆ ಹರಿಯಲು ಬಿಡದೆ, ಒಳ ಚರಂಡಿಗಳಿಂದಲೇ ಕೊಳಚೆ ನೀರು ಹರಿಯುವಂತೆ ಮಾಡುವ ಜೊತೆಗೆ ಕೊಳಚೆ ನೀರನ್ನು ಸಂಪೂರ್ಣವಾಗಿ ಶುದ್ಧೀಕರಿಸಿ ಕೆರೆಗಳಿಗೆ ಬಿಡಬೇಕು.
- ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಇಂಗು ಗುಂಡಿಗಳ ನಿರ್ಮಾಣ ಮಾಡುವುದು.
- ಶುದ್ಧ, ಹೊಸ ನೀರನ್ನು ಉಳಿಸಲು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ವಿಧಾನಗಳನ್ನು ಅನುಷ್ಠಾನಕ್ಕೆ ತರುವುದು.
- ಅಂತರ್ಜಲದ ವಿವೇಚನಾರಹಿತ, ಯಥೇಚ್ಛ ಬಳಕೆಯನ್ನು ನಿಯಂತ್ರಿಸುವುದು ಹಾಗೂ ನೀರಿನ ಮಿತ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.
- ನೀರು ಪೂರೈಕೆಯ ಮೂಲವಾಗಿ ನಗರದ ಕೆರೆಗಳನ್ನು ಬಳಸುವುದು.
- ಅನಧಿಕೃತವಾಗಿ ಬೋರ್ ವೆಲ್ಗಳು ಕೊರೆಯುವುದನ್ನು ತಡೆಯುವ ಜೊತೆಗೆ ಅಂತಹವರ ಮೇಲೆ ದುಪ್ಪಟ್ಟು ದಂಡವನ್ನು ವಿಧಿಸುವುದು.
- ಸೋರಿಕೆಯಾಗುವ ನೀರನ್ನು ತಡೆಯಲು ಸೂಕ್ತ ಕ್ರಮವಹಿಸುವುದು.
- ಅಪಾರ್ಟ್ಮೆಂಟ್ಗಳಲ್ಲಿ ಎಸ್ಟಿಪಿಗಳ ನಿರ್ಮಿಸುವುದನ್ನು ಕಡ್ಡಾಯಗೊಳಿಸುವುದು.
- ವಿಕೇಂದ್ರೀಕೃತ ಪದ್ದತಿಯಲ್ಲಿ ಎಸ್ಟಿಪಿಗಳನ್ನು ನಿರ್ಮಿಸಲು ಕ್ರಮವಹಿಸುವುದು.
- ಕಲುಷಿತ ನೀರು ಶುದ್ಧೀಕರಿಸಿ ಸಂಸ್ಕರಿಸಿದ ನೀರನ್ನು ಮರು ಬಳಕೆ ಮಾಡಲು ನಾಗರಿಕರಲ್ಲಿ ಜಾಗೃತಿ ಮೂಡಿಸುವುದು.
- ಒಳ ಚರಂಡಿಗಳ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳುವುದು.
ಈ ವೇಳೆ ದಯಾನಂದ ಸಾಗರ್ ತಾಂತ್ರಿಕ ಮಹಾವಿದ್ಯಾಲಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ರಾಮರಾಜು, ಜಲಮಂಡಳಿಯ ಮುಖ್ಯ ಅಭಿಯಂತರರಾದ ವೆಂಕಟೇಶ್, ಸುರೇಶ್, ಜಲಮಂಡಳಿ ಅಧಿಕಾರಿಗಳು, ದಯಾನಂದ ಸಾಗರ್ ಕಾಲೇಜು ಪ್ರಾಧ್ಯಾಪಕರು, ಜಲ ತಜ್ಞರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Gruhalakshmi Scheme: ರಾಜ್ಯದ 11 ಸಾವಿರ ಕಡೆ ಆ.27ರಂದು ಗೃಹ ಲಕ್ಷ್ಮೀ ಯೋಜನೆಗೆ ಏಕಕಾಲಕ್ಕೆ ಚಾಲನೆ; ಡಿಸಿಎಂ ಡಿಕೆಶಿ